ಮತಗಳ್ಳತನದ ವಿರುದ್ಧ ಜನರಲ್ ಝೆಡ್ ಪ್ರತಿಭಟನೆಗೆ ಕರೆ: ರಾಹುಲ್ ಗಾಂಧಿ ನಗರ ನಕ್ಸಲರಂತೆ ಮಾತನಾಡುತ್ತಿದ್ದಾರೆ; ಸಿಎಂ ಫಡ್ನವೀಸ್ ವಾಗ್ದಾಳಿ| CM Fadnavis

Untitled design (51)
Published on

CM Fadnavis: ಮತಗಳ್ಳತನ ಆರೋಪವನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುರುವಾರ ಸುದ್ದಿಗೋಷ್ಠಿಯ ವಿಡಿಯೋ ಹಾಕಿ ಎಕ್ಸ್​ನಲ್ಲಿ ಮತಗಳ್ಳತನದ ವಿರುದ್ದ ಜನರಲ್ ಝೆಡ್ ಸಮುದಾಯ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಅವರು ನಗರ ನಕ್ಸಲರಂತೆ ಮಾತನಾಡುತ್ತಿದ್ದಾರೆ ಎಂದು ಶುಕ್ರವಾರ (ಸೆ. 19) ವಾಗ್ದಾಳಿ ನಡೆಸಿದ್ದಾರೆ.

ಜನರಲ್ ಝೆಡ್ ಸಮುದಾಯಕ್ಕೆ ಕರೆ ನೀಡಿದ ವಿಚಾರಕ್ಕೆ ಮುಂಬೈನಲ್ಲಿ ಮಾತನಾಡಿರುವ ಫಡ್ನವೀಸ್, ರಾಹುಲ್ ಗಾಂಧಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ವಿರುದ್ಧ ಯುವ ಸಮುದಾಯವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ, ಅದಕ್ಕಾಗಿ ಯುವಜನರಲ್ಲಿ ಕೇಳಿಕೊಳ್ತಿದ್ದಾರೆ. ಅದು ಮತಗಳ್ಳತನ ಅಲ್ಲ, ಅವರ ಮೆದುಳನ್ನು ಕದಿಯಲಾಗಿದೆ ಎಂದು ಕಿಡಿಕಾರಿದರು.

ಸಂವಿಧಾನ, ಪ್ರಜಾಪ್ರಭತ್ವವಾದಿ ಸಂಸ್ಥೆಗಳಲ್ಲಿ ನಂಬಿಕೆಯಿಲ್ಲದ ನಗರ ನಕ್ಸಲರ ರೀತಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ಅವರ ಸಲಹೆಗಾರರು ಸಹ ಇದೇ ರೀತಿ ಮನಸ್ಥಿತಿಯನ್ನು ಹೊಂದಿದ್ದಾರೆ. ಭಾರತದ ಜನರಲ್ ಝಡ್ ಸಮೂಹಕ್ಕೆ ಸಂವಿಧಾನದಲ್ಲಿ ನಂಬಿಕೆಯಿದೆ. ಪ್ರಜಾಪ್ರಭುತ್ವವನ್ನು ಗೌರವಿಸುತ್ತಾರೆ ಮತ್ತು ನವೋದ್ಯಮ ಮತ್ತು ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ದೇಶದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತಗಳ್ಳತನ ನಡೆಯುತ್ತಿದೆ. ಮತಗಳ್ಳತನ ಮಾಡುವವರನ್ನು ಭಾರತೀಯ ಚುನಾವಣೆ ಆಯೋಗ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಕ್ಷಣೆ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೇ ಭಾರತೀಯ ಪ್ರಜಾಪ್ರಭುತ್ವವನ್ನು ನಾಶ ಮಾಡುವವರಿಗೆ ಬೆಂಬವಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದರು.

ಕರ್ನಾಟಕ ಆಳಂದ ವಿಧಾನಸಭೆ ಕ್ಷೇತ್ರ ಮತ್ತು ಮಹಾರಾಷ್ಟ್ರದ ರಾಜೂರು ಕ್ಷೇತ್ರದ ಮತದಾರರ ಉದಾಹರಣೆ ನೀಡಿ, ಸಾಫ್ಟವೇರ್ ಬಳಿಸಿ ಮತಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ. ಆಳಂದ ಕ್ಷೇತ್ರದ 6 ಸಾವಿರ ಮತಗಳಲ್ಲಿ ಹೊರ ರಾಜ್ಯದ ಲಾಗಿನ್ ಐಡಿ ಮೂಲಕ ಅಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.

ಇದೇ ಆರೋಪದ ಸುದ್ದಿಗೋಷ್ಠಿ ವಿಡಿಯೋವನ್ನು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ನೇಪಾಳದಲ್ಲಿ ಪ್ರಸಿದ್ಧಿ ಪಡೆದ ಜನರಲ್ ಝೆಡ್ ಸಮೂಹ ಪದವನ್ನು ಉಲ್ಲೇಖಿಸಿ ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಿಸಲು ಹಾಗೂ ಮತ ಕಳ್ಳತನವನ್ನು ನಿಲ್ಲಿಸಿಲು ದೇಶದ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net