

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದುದು ನಮ್ಮ ಕರ್ತವ್ಯ. ದೇವಾಲಯಗಳು ಸಂಸ್ಕಾರ, ಸಂಸ್ಕೃತಿ ಸಾರುವ ಪ್ರಧಾನ ಕೇಂದ್ರ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು. ಕಡಬ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಕೇಂದ್ರ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಎಡಮಂಗಲ ಗ್ರಾಪಂ ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಸೀತಾರಾಮಯ್ಯ ಕೇಂಜೂರು, ದೆಹಲಿ ತುಳು ಸಂಘದ ಅಧ್ಯಕ್ಷ ವಸಂತ ರೈ ಬೆಳ್ಳಾರೆ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸದಸ್ಯ ವೆಂಕಪ್ಪ ಗೌಡ ಆಲಾಜೆ ವಂದಿಸಿದರು. ಪ್ರದೀಪ್ ಎಣ್ಮೂರು ನಿರೂಪಿಸಿದರು. ಬುಧವಾರ ಕೇತ್ರಕ್ಕೆ ಆಗಮಿಸಿದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ನಮ್ಮ ಊರಿನ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಬೇಕೆಂಬುದು ಪ್ರತಿಯೊಬ್ಬರ ಆಶಯ. ನಮ್ಮ ಸಂಸ್ಕೃತಿ ಉಳಿಸಲು ಅದಕ್ಕೆ ಕೇಂದ್ರ ದೇವಸ್ಥಾನ. ಪುಸ್ತಕದ ಶಿಕ್ಷಣದ ಜತೆಗೆ ಸಂಸ್ಕಾರದ ಶಿಕ್ಷಣ ಮಕ್ಕಳಿಗೆ ನೀಡುವುದರಿಂದ ಸಂಸ್ಕಾರ ಬೆಳೆಸಲು ಸಾಧ್ಯವಿದೆ. ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ