

ಉಪ್ಪಿನಂಗಡಿ: ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಆಟದ ಮೈದಾನ ಪಕ್ಕದಲ್ಲಿ ನಮ್ಮೂರು ನಮ್ಮವರು ಸಂಘಟನೆ ನಿರ್ಮಿಸಿದ ಕಟ್ಟಡದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜತೆ ಉಂಟಾದ ವಿವಾದ ಭೂ ಸರ್ವೇ ಮೂಲಕ ಬಗೆಹರಿದಿದ್ದು, ಅಂಗನವಾಡಿಗೆಂದು ಮಂಜೂರಾದ ಭೂಮಿಯನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಈಗಿನ ಕಟ್ಟಡ ನಮ್ಮೂರು ನಮ್ಮವರು ಸಂಘಟನೆಗೆ ಸೇರಿದ್ದೆಂದು ದೃಢಪಟ್ಟಿದೆ.
ನಮ್ಮೂರು ನಮ್ಮವರು ಸಂಘಟನೆಯವರು ತಮ್ಮ ಕಾರ್ಯಚಟುವಟಿಕೆಗಾಗಿ ಕಟ್ಟಡವೊಂದನ್ನು ನಿರ್ಮಿಸಿದ್ದು, ಸ್ಥಳೀಯ ಮಕ್ಕಳಿಗೆ ಅಧಿಕೃತ ಅಂಗನವಾಡಿ ಕಟ್ಟಡ ನಿರ್ಮಾಣವಾಗುವವರೆಗೆ ಈ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಅಂಗನವಾಡಿ ನಡೆಸಲು ಒದಗಿಸಿಕೊಟ್ಟಿದ್ದರು. ಈ ಕಟ್ಟಡಕ್ಕೆ ಒಂದೆಡೆ ಸಂಘಟನೆಯ ಫಲಕವಿದ್ದರೆ, ಕೆಲದಿನಗಳ ಹಿಂದೆ ಅಪರಿಚಿತರು ಅಂಗನವಾಡಿ ಕೇಂದ್ರವೆಂದು ಫಲಕ ಅಳವಡಿಸಿ ವಿವಾದ ಹುಟ್ಟು ಹಾಕಿದ್ದರು.
ಇದನ್ನು ಗಮನಿಸಿದ ಸಂಘಟನೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಪರ-ವಿರೋಧ ಅಭಿಪ್ರಾಯ ನಡುವೆ ಭೂಮಾಪನ ಇಲಾಖೆ ಮೂಲಕ ಕಟ್ಟಡ ಯಾರಿಗೆ ಸೇರಿದೆ ಎಂಬುದನ್ನು ಗುರುತಿಸಲು ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ನಡೆದು ಕಟ್ಟಡವು ಸಂಘಟನೆಗೆ ಸೇರಿದ್ದು ಎಂದು ಖಚಿತಗೊಂಡಿದೆ.
ಸಹಾಯ ಮಾಡಲು ಹೋದರೆ ತಮ್ಮ ಕಟ್ಟಡವನ್ನೇ ಕಸಿಯುವ ಹುನ್ನಾರ ನಡೆಸಿದ ಮಂದಿ ಬಗ್ಗೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಸ್ಥಳೀಯ ಮೈದಾನವೊಂದನ್ನು ಕಬಳಿಸುವ ಯತ್ನವನ್ನು ಈ ಸಂಘಟನೆ ತಡೆಗಟ್ಟಿದ ಬಳಿಕ ಯಾವುದಾದರೊಂದು ವಿವಾದಕ್ಕೆ ಎಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.