ಮನೆಬಾಗಿಲಿಗೆ ಹಕ್ಕುಪತ್ರ: ಶಾಸಕ ಅಶೋಕ್ ಕುಮಾರ್ ರೈ ಭರವಸೆ

Upp_title deed
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಅಕ್ರಮ- ಸಕ್ರಮ ಬೈಠಕ್ ಗ್ರಾಮಮಟ್ಟದಲ್ಲಿ ನಡೆಸಿ ಜಾತಿ- ಧರ್ಮ, ರಾಜಕೀಯ ಬೇಧವಿಲ್ಲದೆ ಎಲ್ಲ ಅರ್ಹರಿಗೂ ಅಕ್ರಮ- ಸಕ್ರಮ, 94ಸಿ, 94ಸಿಸಿ ಹಕ್ಕುಪತ್ರಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.

ಹಿರೇಬಂಡಾಡಿಯ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದ ಅವರು,ಹಿರೇಬಂಡಾಡಿ, ಬಜತ್ತೂರು ಭಾಗದ ಜನರ 400ರಷ್ಟು ಅಕ್ರಮ- ಸಕ್ರಮ, 94 ಸಿಯ ಅರ್ಜಿಗಳು ಹಲವು ವರ್ಷಗಳಿಂದ ವಿಲೇವಾರಿ ಆಗದೆ ಕಂದಾಯ ಇಲಾಖೆಯಲ್ಲಿ ಇರುವ ಬಗ್ಗೆ ಪ್ರಸ್ತಾಪಿಸಿ, ಈ ಮೊದಲು ಈ ಗ್ರಾಮಗಳಿಗೆ ಹತ್ತಿರದವರೆ ಆದ ಶಾಸಕರಿದ್ದರೂ ಅವರ ಸಮಸ್ಯೆ ಪರಿಹಾರ ಮಾಡಲು ಇವರಿಂದ ಆಗಿಲ್ಲ ಎನ್ನುವುದು ವಿಶೇಷವೆನಿಸುತ್ತದೆ ಎಂದು ಹೇಳಿದರು.

ಅಕ್ರಮ- ಸಕ್ರಮ ಸಮಿತಿಯ ಸದಸ್ಯ ಮುಹಮ್ಮದ್ ಬಡಗನ್ನೂರು, ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಅಕ್ರಮ- ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪಲೇಖ ಆಳ್ವ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಉಪ್ಪಿನಂಗಡಿ ಕಂದಾಯ ಹೋಬಳಿ ನಿರೀಕ್ಷಕ ಚಂದ್ರ ನಾಯ್ಕ, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ತೌಸೀಫ್ ಯು.ಟಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ ಮತ್ತಿತರರು ಉಪಸ್ಥಿತರಿದ್ದರು.

ಹಿರೇಬಂಡಾಡಿ ವಿಎ ನರಿಯಪ್ಪ ಸ್ವಾಗತಿಸಿ ನಿರೂಪಿಸಿದರು. ಅಕ್ರಮ-ಸಕ್ರಮ ಬೈಠಕ್‌ನಲ್ಲಿ 94ಸಿಯಡಿ 15 ಮಂದಿಗೆ ಹಕ್ಕುಪತ್ರ ನೀಡಲಾಯಿತು. 53 ಅಕ್ರಮ-ಸಕ್ರಮ ಕಡತಗಳಿಗೆ ಮಂಜೂರಾತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net