

Bangladesh Border: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. 26 ಅಮಾಯಕರನ್ನು ಬಲಿ ಪಡೆದ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆ ಪಣತೊಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವ ಸಮಯದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು. ತಮ್ಮ ವಿರುದ್ಧ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದೆ ಎಂಬ ಮಾಹಿತಿ ಬೆನ್ನಲ್ಲೇ ಇದೀಗ ಪಾಕ್ ಸರ್ಕಾರ ಬಾಂಗ್ಲಾದೇಶದೊಂದಿಗೆ ಕೈಜೋಡಿಸಲು ಪ್ರಯತ್ನಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಪಹಲ್ಗಾಮ್ ಉಗ್ರರ ದಾಳಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಭಾರತ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಎಲ್ಲಾ ಆಯಾಮಗಳಲ್ಲಿಯೂ ಸಜ್ಜಾಗಿ ನಿಂತಿದೆ. ಈ ಸಮಯದಲ್ಲಿ, ಭಾರತೀಯ ಗುಪ್ತಚರ ಮೂಲಗಳು ಮತ್ತು ಭದ್ರತಾ ಪಡೆಗಳು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಡಿಗಳಲ್ಲಿ ಹೈ ಅಲರ್ಟ್ ಘೋಷಿಸಿವೆ. ಬಾಂಗ್ಲಾ ಗಡಿಯಲ್ಲಿ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.
ಮುಹಮ್ಮದ್ ಯೂನಸ್ ನೇತೃತ್ವದ ಸರ್ಕಾರದ ಕ್ರಮಗಳನ್ನು ಪಾಕಿಸ್ತಾನದ ಐಎಸ್ಐ ಮತ್ತು ಪಾಕಿಸ್ತಾನಿ ಸೈನಿಕರು ನಡೆಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ. ಇದರಿಂದಾಗಿ ಬಾಂಗ್ಲಾದೇಶ ಗಡಿಯಲ್ಲಿ ಹೆಚ್ಚಿನ ಜಾಗರೂಕತೆಯ ಅಗತ್ಯತೆಯ ಬಗ್ಗೆ ಭದ್ರತಾ ಸಂಸ್ಥೆಗಳು ಭಾರತೀಯ ಸೇನೆಯನ್ನು ಹೈಅಲರ್ಟ್ ಮಾಡಿದೆ. ಮಿಲಿಟರಿ ಕ್ರಮದ ಜತೆಗೆ, ಪಾಕಿಸ್ತಾನವು ಬಾಂಗ್ಲಾದೇಶ ಮತ್ತು ಅದರ ಮೂಲಭೂತವಾದಿ ಇಸ್ಲಾಮಿಸ್ಟ್ ಗುಂಪುಗಳೊಂದಿಗೆ ತನ್ನ ನಿಕಟ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.
ಇದು ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಪಿತೂರಿಯ ಮೂಲವಾಗಿದೆ. ಭಾರತದಲ್ಲಿ ದಂಗೆ ನಿಗ್ರಹ ಚಟುವಟಿಕೆಗಳನ್ನು ನಡೆಸಲು ಎದುರಾಳಿ ರಾಷ್ಟ್ರ ತಯಾರಿ ನಡೆಸುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇತ್ತೀಚೆಗೆ, ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ವಕ್ಫ್ ಕಾಯ್ದೆಯ ವಿರುದ್ಧ ಗಲಭೆಗಳು ನಡೆದಿದ್ದವು. ಆ ಗಲಭೆಗಳಲ್ಲಿ ಬಾಂಗ್ಲಾದೇಶಿ ನಾಗರಿಕರು ಇರುವುದನ್ನು ಗುಪ್ತಚರ ಮೂಲಗಳು ಗುರುತಿಸಿವೆ.
ಆ ಗಲಭೆಗಳಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತೀಯ ಭದ್ರತಾ ಸಂಸ್ಥೆಗಳು ಮತ್ತಷ್ಟು ಅಶಾಂತಿ ಉಂಟಾಗುವ ಸಾಧ್ಯತೆಯನ್ನು ಗುರುತಿಸಿವೆ. ಗಡಿ ಪ್ರದೇಶಗಳಲ್ಲಿ ಹೈ ಅಲರ್ಟ್ ವಿಧಿಸಲಾಗಿದೆ. ಈಗಾಗಲೇ ಗುಪ್ತಚರ ಸಂಸ್ಥೆಗಳು ಕೇಂದ್ರಕ್ಕೆ ಸಂಬಂಧಿತ ಪುರಾವೆಗಳನ್ನು ಸಲ್ಲಿಸಿವೆ. ಭಾರತದಲ್ಲಿ ಮತ್ತೆ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಗಡಿಭಾಗಗಳಲ್ಲಿ ಹೈಅಲರ್ಟ್ ಆಗಿರುವುದು ಸೂಕ್ತ ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).