

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ (Virat Kohli) ಏಕದಿನ ವಿಶ್ವಕಪ್, ಐಪಿಎಲ್ ಹಾಗೂ ಟಿ20 ವಿಶ್ವಕಪ್ನಲ್ಲಿ ಭರ್ಜರಿ ರನ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರನ್ ಗಳಿಸಲು ಪರದಾಡಿದ್ದ ವಿರಾಟ್ ತಮ್ಮ ಕಳಪೆ ಫಾರ್ಮ್ಅನ್ನು ಬಾಂಗ್ಲಾದ ಎದುರು ಮುಂದುವರೆಸಿದ್ದು, ರನ್ ಗಳಿಸದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದ ವಿರಾಟ್ ಯಾಕೋ ಅದನ್ನು ಸಾಧ್ಯವಾಗಿಸುವುದು ಡೌಟ್ ಎಂದು ಹೇಳಲಾಗುತ್ತಿದ್ದು, ಇದು ಅಸಾಧ್ಯ ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯಪಟ್ಟಿದ್ದು, ಇವರ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಈ ಕುರಿತು ಮಾತನಾಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಜೆಂಡರಿ ಆಟಗಾರ ಬ್ರಾಡ್ ಹಾಗ್, ವಿರಾಟ್, ಸ್ಮಿತ್ ಮತ್ತು ರೂಟ್ ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ಆಟಗಾರರು ಎಂದು ಪರಿಗಣಿಸಲಾಗಿದೆ. ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆಗಳನ್ನು ಈ ಮೂವರು ಆಟಗಾರರಿಂದ ಮುರಿಯಲು ಸಾಧ್ಯ ಎಂದರೆ ತಪ್ಪಾಗಲಾರದು. ಆದರೆ, ನನ್ನ ಪ್ರಕಾರ ವಿರಾಟ್ ಕೊಹ್ಲಿ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯುತ್ತಾನೆ ಎಂಬುದು ಅನುಮಾನವಾಗಿದೆ. ‘
ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಿರಾಟ್ನನ್ನು ನೋಡಿದರೆ ಆತ ತನ್ನ ಆವೇಗವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈಗಿನ ಬಗ್ಗೆ ನಾನು ಮಾತನಾಡುತ್ತಿಲ್ಲ. ಸುಮಾರು ಪಂದ್ಯಗಳಲ್ಲಿ ಆತನ ಪ್ರದರ್ಶನ ನೋಡಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಮುಂದಿನ 10 ಟೆಸ್ಟ್ ಪಂದ್ಯಗಳಲ್ಲಿ ಆತ ಫಾರ್ಮ್ಗೆ ಮರಳದಿದ್ದರೆ ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಆತ ಯೋಚಿಸುವುದು ಸೂಕ್ತ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಜೆಂಡರಿ ಆಟಗಾರ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.