

ನವದೆಹಲಿ: ದೇಶದಲ್ಲಿ ಇನ್ನು ಮೂರು ತಿಂಗಳು ಬಿಸಿಲ ಬೇಗೆ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಕೇಂದ್ರ ಮತ್ತು ಪಶ್ಚಿಮ ಪರ್ಯಾಯ ದ್ವೀಪದ ಭಾಗಗಳು ತೀವ್ರ ಉರಿಯೊಂದಿಗೆ ಕೆಟ್ಟ ಪರಿಣಾಮ ಎದುರಿಸಬೇಕಾಗಲಿದೆ ಎಂದೂ ಎಚ್ಚರಿಕೆ ನೀಡಿದೆ.
ದೇಶದ ಹಲವೆಡೆ ಏಪ್ರಿಲ್-ಜೂನ್ ಅವಧಿಯಲ್ಲಿನ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತಲೂ ಅಧಿಕವಿರಲಿದೆ. ಮುಂದಿನ ವಾರದಲ್ಲಿ ದೇಶದ ವಿವಿಧೆಡೆ ಗರಿಷ್ಠ ತಾಪಮಾನ ಕ್ರಮೇಣ 2ರಿಂದ 3 ಡಿ.ಸೆ. ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಮೃತ್ಯುಂಜಯ ಮೊಹಪಾತ್ರ ತಿಳಿಸಿದ್ದಾರೆ. ಈ ಅವಧಿಯಲ್ಲಿ ಬಯಲುಸೀಮೆಯ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಶಾಖದ ಅಲೆಗಳು ಇರಲಿವೆ. ದೇಶದಲ್ಲಿನ ಸಾಮಾನ್ಯವಾಗಿ ಇರುವ ನಾಲ್ಕರಿಂದ 8 ದಿನಗಳ ಅತಿ ಶಾಖದ ದಿನಗಳ ಬದಲಾಗಿ 10ರಿಂದ 20 ದಿನಗಳ ಅತಿ ಶಾಖದ ದಿನಗಳು ಇರಲಿವೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಕರ್ನಾಟಕ, ಗುಜರಾತ್, ಕೇಂದ್ರ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಛತ್ತೀಸ್ಘಡ ಮತ್ತು ಆಂಧ್ರಪ್ರದೇಶಗಳಲ್ಲಿ ಈ ವ್ಯತಿರಿಕ್ತ ಪರಿಣಾಮಗಳು ಗೋಚರಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಗೋದಿ ಬೆಳೆಗಿಲ್ಲ ಕುತ್ತು: ಕೊಯ್ಲಿಗೆ ಬಂದಿರುವ ಗೋದಿ ಬೆಳಗೆ ಗರಿಷ್ಠ ತಾಪಮಾನ ಏರಿಕೆಯಿಂದ ಯಾವುದೇ ತೊಂದರೆ ಇಲ್ಲ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಹಲವೆಡೆ ಶಾಖದ ಅಲೆಗಳ ಮುನ್ಸೂಚನೆ ಇದ್ದರೂ ಗೋದಿ ಬೆಳೆಗೆ ಸಂಬಂಧಿಸಿದಂತೆ ಎಲ್ಲೂ ತೊಂದರೆ ಆಗುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಅದರಲ್ಲೂ ಗೋದಿಯನ್ನು ಪ್ರಮುಖವಾಗಿ ಬೆಳೆಯುವ ಮಧ್ಯಪ್ರದೇಶದಲ್ಲಿ ಸದ್ಯ 37-40 ಡಿ.ಸೆ. ತಾಪಮಾನವಿದ್ದು, ಇದು 42 ಡಿ.ಸೆ. ತಲುಪುವ ಸಾಧ್ಯತೆ ಇದೆ. ಅದಾಗ್ಯೂ ರಾಜ್ಯದಲ್ಲಿ ಶೇ.90ರಷ್ಟು ಕಟಾವು ಆಗಿರುವುದರಿಂದ ಅಂಥ ತೊಂದರೆ ಇಲ್ಲ. ಹಾಗೇ ಪಂಜಾಬ್, ಹರಿಯಾಣ, ಉತ್ತರಪ್ರದೇಶಗಳಲ್ಲಿ ತಾಪಮಾನ 35 ಡಿ.ಸೆ. ದಾಟಿದರೂ ಗೋದಿಗೆ ತೊಂದರೆ ಇಲ್ಲ ಎಂದು ಐಎಂಡಿ ಹೇಳಿದೆ. ಭಾರತ 2022-23ರಲ್ಲಿ 1,105.5 ದಶಲಕ್ಷ ಟನ್ ಗೋದಿ ಉತ್ಪಾದಿಸಿದ್ದು, ಅದರಲ್ಲಿ ಉತ್ತರಪ್ರದೇಶ ಶೇ. 30.4, ಮಧ್ಯಪ್ರದೇಶ ಶೇ. 20.56, ಪಂಜಾಬ್ ಶೇ. 15.18, ಹರಿಯಾಣ ಶೇ. 9.89 ಮತ್ತು ರಾಜಸ್ಥಾನ ಶೇ. 9.62 ಗೋದಿ ಉತ್ಪಾದಿಸಿವೆ.