ಬೆಂಗಳೂರು:ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಳವಾಗುತ್ತಿದೆ. ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬೇಕಿದ್ದು, ಸೋಮವಾರ 33 ಡಿ.ಸೆ. ಇದ್ದು, ವಾಡಿಕೆಗಿಂತ 2 ಡಿ.ಸೆ. ಅಧಿಕ ಉಷ್ಣಾಂಶ ದಾಖಲಾಗಿದೆ.
ಕಳೆದ ವರ್ಷದಂತೆ ಈ ಬಾರಿಯೂ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆ. ದಾಟುವ ನಿರೀೆ ಇದೆ. ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ವಾಡಿಕೆಗಿಂತ 5&6 ಡಿಗ್ರಿ ಸೆ. ಅಧಿಕ ಉಷ್ಣಾಂಶ ಏರಬಹುದು. ಸಾಮಾನ್ಯವಾಗಿ ಮಾ.1ಕ್ಕೆ ಬೇಸಿಗೆ ಆರಂಭವಾಗಿ ಮೇ 31ರವರೆಗೆ ಇರುತ್ತದೆ. ಆದರೆ, ಈ ಬಾರಿಯೂ ವಾಡಿಕೆಗೆ ಮುನ್ನವೇ ಬೇಸಿಗೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ನೆತ್ತಿ ಸುಡಲಾರಂಭಿಸಿದೆ. ಇದು ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲಿ ಅಧಿಕವಾಗಿ ದಾಖಲಾಗುವ ಮುನ್ಸೂಚನೆಯಾಗಿದೆ.
60 ರೂ.ನತ್ತ ಎಳನೀರು?:
ಬಿಸಿಲ ಬೇಗೆಯಿಂದ ಪಾರಾಗಲು ಜನರು ತಂಪು ಪಾನೀಯ, ಮಜ್ಜಿಗೆ, ಎಳನೀರು, ಕಲ್ಲಂಗಡಿ ಹಣ್ಣು, ಶರಬತ್, ಕಬ್ಬಿನ ಹಾಲು, ಐಸ್ಕ್ರಿಮ್ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ಇವುಗಳ ಬೆಲೆಯೂ ಗಗನಕ್ಕೆರುತ್ತಿವೆ. ಎಳನೀರು 50 ರೂ., ಕಲ್ಲಂಗಡಿ ಕೆ.ಜಿ.ಗೆ 35ರಿಂದ 40 ರೂ.ನಂತೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಳನೀರು ದರ 60 ರೂ.ಗೆ ಏರಿಕೆಯಾಗುತ್ತದೆ ಎಂಬ ಮಾಡುಗಳು ಕೇಳಿಬರುತ್ತಿವೆ.
ಹೆಚ್ಚು ನೀರು ಕುಡಿಯಿರಿ: ಉಷ್ಟತೆ ಏರುಗತಿಯಲ್ಲಿ ಸಾಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜನರು ಹೆಚ್ಚು ನೀರು ಕುಡಿಯುವುದು, ಬಿಸಿಲಿನಲ್ಲಿ ಹೆಚ್ಚು ಓಡಾಡದೆ ನೆರಳಿನ ಆಶ್ರಯ ಪಡೆಯಬೇಕು ಎನ್ನುತ್ತಾರೆ ವೈದ್ಯಾಧಿಕಾರಿಗಳು. ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯದಿದ್ದರೆ ಉರಿ ಮೂತ್ರದ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರ ಜತೆಗೆ ಕಿಡ್ನಿಯಲ್ಲಿ ಹರಳು ಸೃಷ್ಟಿಯಾಗಿ ಸಮಸ್ಯೆ ಉಲ್ಬಣಿಸುವುದನ್ನು ಅಲ್ಲಗಳೆಯುವಂತಿಲ್ಲ.
ಉತ್ತರ ಭಾರತಕ್ಕೆ ಪೂರೈಕೆ: ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ, ಮದ್ದೂರು, ತುಮಕೂರು, ನೆಲಮಂಗಲ, ಕೆ.ಆರ್.ಪೇಟೆ, ಹುಣಸೂರು, ಪಾಂಡವಪುರ, ದೊಡ್ಡಬಳ್ಳಾಪುರ ಸುತ್ತಮುತ್ತಲ ಗ್ರಾಮಗಳಿಂದ ನಗರಕ್ಕೆ ಎಳನೀರು ಸರಬರಾಜಾಗುತ್ತದೆ. ರಾಜ್ಯದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಎಳನೀರು ಮುಂಬೈ, ಉತ್ತರ ಭಾರತದ ಕಡೆಗೂ ಪೂರೈಕೆಯಾಗುತ್ತಿದೆ. ಆದರೆ ನಮ್ಮ ಬೆಳೆಯುವ ಎಳನೀರು ನಮ್ಮ ನಾಡಿನಲ್ಲೇ ಪ್ರಧಾನವಾಗಿ ಮಾರಾಟವಾದರೆ ಬೆಲೆ ಏರಿಕೆ ಬಿಸಿ ತಾಕಲಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮಣ್ಣಿನ ಮಡಿಕೆಗೆ ಮೊರೆ: ಬೇಸಿಗೆ ಬಿಸಿಲಿನ ಆರ್ಭಟ ಹೆಚ್ಚುತ್ತಿದ್ದಂತೆ ಜನರು ಬಡವರ ಫ್ರಿಡ್ಜ್ ಎಂದೇ ಕರೆಯುವ ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ಫ್ರಿಡ್ಜ್ ನೀರು ಕುಡಿದರೆ ನೆಗಡಿ, ಕೆಮ್ಮು, ಬಾಧಿಸುತ್ತಿದೆ ಏನ್ನುವ ಉದ್ದೇಶದಿಂದ ಮಾರುಕಟ್ಟೆಯಿಂದ ಮಣ್ಣಿನ ಮಡಿಕೆ ಖರೀದಿ ಮಾಡಿ, ತಣ್ಣನೆಯ ನೀರು ಕುಡಿಯಲು ಮುಂದಾಗಿದ್ದಾರೆ. ಬೆಂಗಳೂರಿನ ಹಲವೆಡೆ ರಸ್ತೆ ಬದಿಗಳಲ್ಲಿ ಮಣ್ಣಿನ ಮಡಿಕೆ ಮಾರಾಟ ಸಾಮಾನ್ಯವಾಗಿದೆ.