ಬೆಂಗಳೂರು: ಆರ್ಥಿಕ ಕಾರಣದಿಂದ ರಾಜ್ಯದ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಧೋರಣೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
ಎಬಿವಿಪಿ ಬೆಂಗಳೂರು ಮಹಾನಗರ ಟಕದವರು ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ಮತ್ತು ನೃಪತುಂಗ ಯೂನಿವರ್ಸಿಟಿ ವಿದ್ಯಾರ್ಥಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಬಿವಿಪಿ ಮಹಾನಗರ ಕಾರ್ಯದರ್ಶಿ ತೇಜಸ್ ಕುಮಾರ್ ಮಾತನಾಡಿ, 10-15 ವರ್ಷಗಳಿಂದ ಸರ್ಕಾರಗಳು ವಿವಿಗಳಿಗೆ ಯಾವುದೇ ಅನುದಾನ ನೀಡಿಲ್ಲ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ, ಮರು ಎಣಿಕೆ ಅಥವಾ ಮರು ಮೌಲ್ಯಮಾಪನ ಶುಲ್ಕಗಳಲ್ಲಿ ಮತ್ತು ಆಂತರಿಕ ಹಣಕಾಸು ಉತ್ಪಾದನೆ ಮೂಲಕ ವಿವಿಗಳು ನಡೆಯುತ್ತಿರುವುದು ಅವಮಾನದ ಸಂಗತಿ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಗೌರವ ಇದೆ. ಕೇವಲ ಹಣಕಾಸಿನ ದೃಷ್ಟಿಯಿಂದ 9 ವಿವಿಗಳನ್ನು ಮುಚ್ಚಲು ಹೊರಟಿರುವುದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ ಎಂದರು.
ಸರ್ಕಾರಿ ವಿವಿಗಳನ್ನು ಗಟ್ಟಿಗೊಳಿಸುವ ಕಾಳಜಿ ಮತ್ತು ಇಚ್ಛಾಶಕ್ತಿಯನ್ನು ಸರ್ಕಾರ ಕೈಗೊಳ್ಳಬೇಕು. ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ವಿವಿಗಳನ್ನು ಮುಚ್ಚುತ್ತಿರುವುದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂ. ಬಜೆಟ್ನಲ್ಲಿ ಕೊಟ್ಟಿದೆ. ಆದರೆ, ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಹಣ ಒದಗಿಸಲು ಸಾಧ್ಯವಾಗದೆ ವಿವಿಗಳನ್ನು ಮುಚ್ಚಲು ಮುಂದಾಗಿರುವುದು ಖಂಡನಾರ್ಹ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಸಿಟ್ಟು ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿಯ ಸ್ಥಳಿಯ ಮುಖಂಡರಾದ ವಿಜಯ್ ಗೌಡರ್, ಶ್ರೀನಿವಾಸ್, ಯಶ್ವಂತ್, ಅರ್ಚನಾ, ಲಾವಣ್ಯ ಮತ್ತಿತರರಿದ್ದರು.
ವಿವಿಗಳನ್ನು ಮುಚ್ಚಲು ಹೊರಡಿಸಿರುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು. ಇತ್ತೀಚೆಗಷ್ಟೇ ಮೆಟ್ರೋ ದರ ಏರಿಕೆ ಖಂಡಿಸಿ ಮಾಡಿದ್ದ ಪ್ರತಿಭಟನೆಗಾಗಿ ವಿದ್ಯಾರ್ಥಿಗಳ ವಿರುದ್ಧ 16 ಎಫ್ಐಆರ್ ದಾಖಲಿಸಿರುವುದನ್ನು ಕೈಬಿಡಬೇಕು.
| ಶಶಾಂಕ್, ಎಬಿವಿಪಿ ಸದಸ್ಯ.
ಮುಖ್ಯಮಂತ್ರಿ ಮುಂದುವರಿಕೆ ವಿಚಾರ; ಪಕ್ಷದ ಹೈಕಮಾಂಡ್ನ ತೀರ್ಮಾನವೇ ಅಂತಿಮ: CM ಸಿದ್ದರಾಮಯ್ಯ