

Heart Attack: ಮದುವೆ, ಹಬ್ಬ ಹಾಗೂ ಬರ್ತಡೇ ಆಚರಣೆ ಸೇರಿದಂತೆ ಯಾವುದೇ ಸಮಾರಂಭವಿದ್ದರೂ ಅದನ್ನು ಡಿಜೆ ಮೂಲಕ ಸಂಭ್ರಮಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅಬ್ಬರದ ಹಾಡುಗಳನ್ನು ಕೇಳುತ್ತಾ ಜನಸಂದಣಿಯ ನಡುವೆ ಕುಣಿದು ಕುಪ್ಪಳಿಸುತ್ತಾರೆ. ಆದರೆ, ದುರಂತ ಏನೆಂದರೆ, ಇದೇ ಡಿಜೆ ಸೌಂಡಿಗೆ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಸ್ಥಳೀಯ ಉತ್ಸವದ ವೇಳೆ ಈ ಘಟನೆ ನಡೆದಿದೆ. ಸಮರ್ ಬಿಲೋರ್ (13) ಮೃತ ಬಾಲಕ. ಗುಂಪಿನ ನಡುವೆ ಡಿಜೆ ಸೌಂಡಿಗೆ ಸಮರ್ ಕುಣಿಯುತ್ತಿದ್ದ. ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದರೂ ಕುಣಿಯುವುದರಲ್ಲಿ ಮಗ್ನರಾಗಿದ್ದ ಇತರರು ಆತನನ್ನು ಗಮನಿಸಲಿಲ್ಲ. ಸ್ವಲ್ಪ ಸಮಯದ ಬಳಿಕ ಸಮರ್ ಬಿದ್ದಿರುವುದನ್ನು ನೋಡಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಆತ ಬದುಕುಳಿಯಲಿಲ್ಲ.
ಇನ್ನು ಸಮರ್‌ಗೆ ಬಾಲ್ಯದಿಂದಲೂ ಹೃದ್ರೋಗವಿದೆ. ಆದರೂ ಆತನ ಆರೋಗ್ಯ ಚೆನ್ನಾಗಿಯೇ ಇತ್ತು ಎಂದು ಅವರ ತಾಯಿ ಹೇಳಿದ್ದಾರೆ. ಅಧಿಕ ಶಬ್ದವನ್ನು ದೇಹ ತಡೆದುಕೊಳ್ಳಲು ಸಾಧ್ಯವಾಗದೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವೈದ್ಯರು ಹೇಳುತ್ತಾರೆ. ಹೃದಯದ ಕಾಯಿಲೆ ಇರುವವರು ಇಂತಹ ಡಿಜೆ ಪಾರ್ಟಿಗಳಲ್ಲಿ ಭಾಗವಹಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇನ್ನು ಈ ಘಟನೆಯ ನಂತರ 40 ರಿಂದ 50 ಡೆಸಿಬಲ್‌ಗಿಂತ ಹೆಚ್ಚಿನ ಸ್ಪೀಕರ್‌ಗಳನ್ನು ಅಳವಡಿಸದಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಇಂತಹ ಘಟನೆಗಳು ಮರುಕಳಿಸಿದರೆ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್)