

Rent Houses: ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗ ಅರಸಿ ದೊಡ್ಡ ನಗರಗಳಿಗೆ ನಿತ್ಯವು ಸಾಕಷ್ಟು ಮಂದಿ ಬರುತ್ತಿರುತ್ತಾರೆ. ಇವರಲ್ಲಿ ಅನೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಬಾಡಿಗೆ ವಸತಿ ಕೂಡ ಒಂದು. ಕೆಲವರು ದುಬಾರಿ ಬಾಡಿಗೆ ಕೊಟ್ಟು ಹಾಸ್ಟೆಲ್‌ಗಳಲ್ಲಿ ವಾಸವಿದ್ದರೆ, ಇನ್ನು ಕೆಲವರು ದುಬಾರಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಮುಂಬೈ, ಬೆಂಗಳೂರು ಮತ್ತು ದೆಹಲಿಯಂತಹ ಜನನಿಬಿಡ ನಗರಗಳಿಗೆ ಬರುವ ಅನೇಕರ ಸ್ಥಿತಿ ಇದು. ಆದ್ದರಿಂದ, ಹೆಚ್ಚು ಆದಾಯವಿಲ್ಲದವರು ಇಂತಹ ನಗರಗಳಲ್ಲಿ ಬದುಕುವುದು ಕಷ್ಟ.
ಇದೇ ಸಮಯದಲ್ಲಿ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬ ತನ್ನ ರೂಮಿನ ಫೋಟೋಗಳು ಮತ್ತು ಅದರ ಬಾಡಿಗೆ ಮೊತ್ತವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಹಾರ ಮೂಲದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮನೀಶ್ ಅಮನ್ ಎಂಬುವರು ಸಿಂಗಲ್ ರೂಮ್ ಮತ್ತು ಬಾತ್ರೂಮ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಯುವಕ ಹಂಚಿಕೊಂಡಿರುವ ಚಿತ್ರದಲ್ಲಿರುವ ಸಾಮಾನ್ಯ ಕೊಠಡಿಯು ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಒಂದು ಬದಿಯಲ್ಲಿ ಹಾಸಿಗೆ ಮತ್ತು ಇನ್ನೊಂದು ಬದಿಯಲ್ಲಿ ಟೇಬಲ್, ಕುರ್ಚಿ ಮತ್ತು ಅಡುಗೆ ಮಾಡಿಕೊಳ್ಳುವ ಸೌಲಭ್ಯಗಳಿವೆ. ಈ ಕೊಠಡಿಗೆ ಏನಿಲ್ಲ ಅಂದ್ರೂ 6 ರಿಂದ 8 ಸಾವಿರ ರೂ. ಬಾಡಿಗೆ ಇರುತ್ತದೆ ಅಂತಾ ನೀವು ಅಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. ಈ ರೂಮಿನ ಬಾಡಿಗೆ ಮೊತ್ತ ಕೇಳದರೆ ನೀವು ಬೆರಗಾಗೋದು ಖಂಡಿತ. ಈ ರೂಮಿಗೆ ತಿಂಗಳಿಗೆ ಕೇವಲ 15 ರೂಪಾಯಿ ಬಾಡಿಗೆ ನೀಡುತ್ತಿರುವುದಾಗಿ ಅಮನ್ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ವೈರಲ್ ಆಗಿರುವ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಅಮಾನ್ ಬಳಿ ರೂಮಿನ ನಿಖರವಾದ ವಿವರಗಳನ್ನು ಕೇಳುತ್ತಿದ್ದಾರೆ. ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲವು ಅಭಿಪ್ರಾಯಪಟ್ಟಿದ್ದಾರೆ. ನಿಜವಾಗಿಯೂ ಇಷ್ಟೊಂದು ಕಡಿಮೆ ಮೊತ್ತ ಇರುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ, ರೂಮ್ಗಳಿಗೆ ಕಡಿಮೆ ಶುಲ್ಕ ವಿಧಿಸುತ್ತಿರುವುದು ವಿದ್ಯಾರ್ಥಿಗಳಿಗೆ ನಿಜಕ್ಕೂ ಖುಷಿಯ ಸಂಗತಿಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)