

ನವದೆಹಲಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನು ಹತ್ಯೆಗೈದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ, ತನ್ನ ಮುಂದಿನ ಟಾರ್ಗೆಟ್ ಅನ್ನು ಬಾಲಿವುಡ್ ಹಿರಿಯ ನಟ ಸಲ್ಮಾನ್ ಖಾನ್ ಮೇಲಿಟ್ಟಿರುವುದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಹಿನ್ನೆಲೆ ನಟನ ಕೊಲೆ ಸಂಚಿಗೆ ದೊಡ್ಡ ಬೇಡಿಕೆಯಿಟ್ಟಿದ್ದ ಲಾರೆನ್ಸ್ ಗ್ಯಾಂಗ್, ಬರೋಬ್ಬರಿ 25 ಲಕ್ಷ ರೂ. ಹಣದ ಜತೆಗೆ ನಾನಾ ಬಗೆಯ ಗನ್ಗಳ ಮೊರೆ ಹೋಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಿನ್ನೆ (ಅ.17) ನವಿ ಮುಂಬೈ ಪೊಲೀಸರು ತಾವು ಸಲ್ಲಿಸಿದ ಚಾರ್ಚ್ಶೀಟ್ನಲ್ಲಿ (Chargesheet) ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಿ ಸಾಗುತ್ತಿರುವ ಮಧ್ಯೆಯೇ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ (New Threat).
ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಇದೀಗ ತಾವು ಅವಿತಿರುವ ಜಾಗದಿಂದಲೇ ಬೆದರಿಕೆ ಕರೆಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಗ್ಯಾಂಗ್ನ ಆರೋಪಿಯೊಬ್ಬ ಮುಂಬೈ ಟ್ರಾಫಿಕ್ ಪೊಲೀಸರೊಬ್ಬರಿಗೆ ಬೆದರಿಕೆ ಸಂದೇಶವನ್ನು ರವಾನಿಸಿದ್ದು, ಲಾರೆನ್ಸ್ ಅವರೊಂದಿಗೆ ಇರುವ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಟ ಸಲ್ಮಾನ್ ಖಾನ್ಗೆ ಇದು ಕೊನೆಯ ಅವಕಾಶ. 5 ಕೋಟಿ ರೂ. ಹಣವನ್ನು ಆತ ಕೊಡಬೇಕು. ಅಕಸ್ಮಾತ್ ಕೊಡಲು ವಿಫಲವಾದರೆ, ಅವನ ಸಾವು ಇತ್ತೀಚೆಗಷ್ಟೇ ನಾವು ಗುಂಡಿಕ್ಕಿ ಕೊಂದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗಿಂತ ಕೆಟ್ಟದಾಗಿರಲಿದೆ ಎಂದು ಎಚ್ಚರಿಸಿದ್ದಾನೆ.
"ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯಿ ಅವರೊಂದಿಗಿನ ದ್ವೇಷಕ್ಕೆ ಮುಕ್ತಾಯ ಹೇಳಲು ಬಯಸಿದ್ದೇ ಆದರೆ, ಶೀಘ್ರವೇ ನಮಗೆ 5 ಕೋಟಿ ರೂಪಾಯಿ ಪಾವತಿಸಬೇಕು. ಇದನ್ನು ಲಘುವಾಗಿ ತೆಗೆದುಕೊಂಡರೆ, ಸಲ್ಮಾನ್ ಜೀವಕ್ಕೆ ಕುತ್ತು ತರಲಿದೆ" ಎಂದು ಗ್ಯಾಂಗ್ನ ಸದಸ್ಯನೊಬ್ಬ ಕಳಿಸಿರುವ ಸಂದೇಶವನ್ನು ಇದೀಗ ಮುಂಬೈ ಪೊಲೀಸರು ರಿವೀಲ್ ಮಾಡಿದ್ದಾರೆ. ಸದ್ಯ ಈ ಬಗ್ಗೆ ಪೊಲಿಸರು ತನಿಖೆ ಆರಂಭಿಸಿದ್ದು, ಕರೆ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ,(ಏಜೆನ್ಸೀಸ್).