ಇಂದು ವಿಶ್ವ ಪ್ರೋಟೀನ್ ದಿನ: ಯಾವ ವಯಸ್ಸಿನವರು ಎಷ್ಟು ಸೇವಿಸಬೇಕು? ಅತಿಯಾದ್ರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ... World Protein Day 2026

ಇಂದು ವಿಶ್ವ ಪ್ರೋಟೀನ್ ದಿನ ( World Protein Day 2026 )
ಇಂದು ವಿಶ್ವ ಪ್ರೋಟೀನ್ ದಿನ ( World Protein Day 2026 )
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿವರ್ಷ ಫೆಬ್ರವರಿ 27 ರಂದು ವಿಶ್ವ ಪ್ರೋಟೀನ್ ದಿನವನ್ನು ಆಚರಿಸಲಾಗುತ್ತದೆ
  • ಪ್ರೋಟೀನ್ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ
  • ನಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್‌ನ ಅಗತ್ಯಗಳ ಬಗ್ಗೆ ಈ ದಿನ ತಿಳಿಸಿ ಕೊಡುತ್ತದೆ
World Protein Day 2026: ಪ್ರತಿವರ್ಷ ಫೆಬ್ರವರಿ 27 ರಂದು ವಿಶ್ವ ಪ್ರೋಟೀನ್ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯಕರ ಜೀವನಶೈಲಿಯಲ್ಲಿ ಪ್ರೋಟೀನ್ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಫೆ. 27 ರಂದು ಆಚರಿಸಲಾಗುವ ಪ್ರೋಟೀನ್ ದಿನವು ನಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್‌ನ ಅಗತ್ಯಗಳ ಬಗ್ಗೆ ತಿಳಿಸಿ ಕೊಡುತ್ತದೆ.

ಪ್ರೋಟೀನ್​ ಏಕೆ ಬೇಕು?

ಪ್ರೋಟೀನ್ ನಮ್ಮ ದೇಹಕ್ಕೆ ಅತ್ಯಂತ ಮುಖ್ಯವಾದ ಪೋಷಕಾಂಶವಾಗಿದೆ. ಏಕೆಂದರೆ, ಅದು ದೇಹದ ಪ್ರತಿ ಕೋಶದ ಮೂಲ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸ್ನಾಯುಗಳನ್ನು ನಿರ್ಮಿಸುವುದು, ದುರಸ್ತಿ ಮಾಡುವುದು, ಬೆಳವಣಿಗೆಗೆ ಸಹಾಯ ಮಾಡುವುದು, ಎಂಜೈಮ್‌ಗಳು, ಹಾರ್ಮೋನ್‌ಗಳು, ಪ್ರತಿರಕ್ಷಣಾ ವ್ಯವಸ್ಥೆಯ ಆ್ಯಂಟಿಬಾಡಿ‌ಗಳು ಮತ್ತು ಇತರ ಅನೇಕ ಮುಖ್ಯ ರಚನೆಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಪ್ರಮಾಣದ ಪ್ರೋಟೀನ್ ಇಲ್ಲದಿದ್ದರೆ ಸ್ನಾಯುಗಳು ದುರ್ಬಲವಾಗುತ್ತವೆ, ಗಾಯಗಳು ಚೇತರಿಕೆ ತಗ್ಗುತ್ತದೆ, ರೋಗ ನಿರೋಧಕ ಶಕ್ತಿ ಕುಸಿಯುತ್ತದೆ ಮತ್ತು ಒಟ್ಟಾರೆ ಆರೋಗ್ಯ ಕ್ಷೀಣಿಸುತ್ತದೆ. ಹೀಗಾಗಿಯೇ ಪ್ರೋಟೀನ್ ಅನ್ನು ಯಾವಾಗಲೂ ಫಿಟ್‌ನೆಸ್ ಹೀರೋ ಎಂದು ಕರೆಯಲಾಗುತ್ತದೆ.

ಪ್ರೋಟೀನ್‌ನ ಲಾಭಗಳೇನು?

ದೇಹದಲ್ಲಿರುವ ಸ್ನಾಯುಗಳನ್ನು ಬಲಪಡಿಸಲು ಪ್ರೋಟೀನ್ ಸಹಕಾರಿಯಾಗಿದೆ. ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬಹುದಾಗಿದ್ದು, ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾಗಿರುವ ರೋಗನಿರೋಧಕ ಶಕ್ತಿ ಉತ್ಪಾದನೆಯಲ್ಲಿ ಪ್ರೋಟೀನ್‌ ಪ್ರಮುಖ ಪಾತ್ರವಹಿಸುತ್ತದೆ. ದಿನವಿಡೀ ಲವಲವಿಕೆ ಮತ್ತು ಉತ್ಸಾಹದಿಂದಿರಲು ಅಗತ್ಯವಾದ ಶಕ್ತಿಯನ್ನು ಸಹ ಒದಗಿಸುತ್ತದೆ.

ಪ್ರೋಟೀನ್ ಕೊರತೆಯ ಲಕ್ಷಣಗಳೇನು?

ಪ್ರೋಟೀನ್ ಕೊರತೆಯಾದಾಗ ದೇಹದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ, ಸ್ನಾಯುಗಳ ದೌರ್ಬಲ್ಯ, ಆಯಾಸ, ದಣಿವು, ಕೂದಲು ಉದುರುವುದು ಅಥವಾ ದುರ್ಬಲಗೊಳ್ಳುವುದು, ಉಗುರುಗಳು ಮುರಿದುಬೀಳುವುದು ಅಥವಾ ದುರ್ಬಲವಾಗುವುದು, ಚರ್ಮದ ಒಣಗುವಿಕೆ ಅಥವಾ ತುರಿಕೆಗಳು, ಆಗಾಗ್ಗೆ ರೋಗಗಳಿಗೆ ಒಳಗಾಗುವುದು, ಊತ (ವಿಶೇಷವಾಗಿ ಕಾಲುಗಳು ಅಥವಾ ಕೈಗಳು), ಹಸಿವು ಹೆಚ್ಚಾಗುವುದು ಅಥವಾ ಮನಸ್ಸಿನ ಏರಿಳಿತಗಳು. ತೀವ್ರ ಸಂದರ್ಭಗಳಲ್ಲಿ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಳ್ಳುವುದು, ಹೊಟ್ಟೆ ಊದಿಕೊಳ್ಳುವುದು ಮತ್ತು ಚರ್ಮದ ಬಣ್ಣ ಬದಲಾವಣೆಗಳು ಕಾಣಿಸಬಹುದು. ಈ ಲಕ್ಷಣಗಳು ಕಾಣಿಸಿದರೆ ಆಹಾರದಲ್ಲಿ ಪ್ರೋಟೀನ್ ಹೆಚ್ಚಿಸಿ ಅಥವಾ ವೈದ್ಯರ ಸಲಹೆ ಪಡೆಯಿರಿ.

ಯಾವ ಆಹಾರಗಳಿಂದ ಪ್ರೋಟೀನ್​ ದೊರೆಯುತ್ತವೆ?

ಸಸ್ಯಾಹಾರಿ ಮೂಲಗಳು: ಬೇಳೆಕಾಳುಗಳು, ಹುರಿಗಡಲೆ, ರಾಜ್ಮಾ, ಸೋಯಾ ಉತ್ಪನ್ನಗಳು, ಪನೀರ್, ಹಾಲು, ಮೊಸರು/ದಹಿ, ಬೀಜಗಳು (ಬದಾಮಿ, ಕಡಲೆಕಾಯಿ, ಆಲಸಂದೆ ಬೀಜಗಳು) ಮತ್ತು ನಟ್ಸ್ (ಬದಾಮಿ, ಗೋಡಂಬಿ ಹಾಗೂ ವಾಲ್‌ನಟ್).
ಮಾಂಸಾಹಾರಿ ಮೂಲಗಳು : ಮೊಟ್ಟೆಗಳು, ಮೀನು (ಸಾಲ್ಮನ್, ಟುನಾ ಅಥವಾ ಸ್ಥಳೀಯ ಮೀನುಗಳು), ಚಿಕನ್ (ವಿಶೇಷವಾಗಿ ಸ್ತನ ಭಾಗ), ಮಟನ್/ಬೀಫ್ (ಲೀನ್ ಕಟ್‌ಗಳು) ಮತ್ತು ಇತರ ಮಾಂಸಗಳು.

ಹೆಚ್ಚಿನ ಪ್ರೋಟೀನ್​ಭರಿತ ಹಣ್ಣುಗಳು

ಪೇರಲ ಹಣ್ಣು: ಪೇರಲ ಅಥವಾ ಸೀಬೆ ಹಣ್ಣು ಸಿಹಿ ರುಚಿ ಹೊಂದಿರುವ ಉಷ್ಣವಲಯದ ಹಣ್ಣಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿದೆ. ಎಲ್ಲ ಹಣ್ಣುಗಳಲ್ಲಿ ಅತ್ಯಧಿಕ ಪ್ರೋಟೀನ್ ಅಂಶ ಹೊಂದಿದ್ದು, ಪ್ರತಿ ಕಪ್‌ಗೆ 4.21 ಗ್ರಾಂ ಪ್ರೋಟೀನ್ ಇರುತ್ತದೆ.
ಆವಕಾಡೋ: ಆವಕಾಡೋಗಳು ಸಿಹಿಯಾಗಿರುವುದಿಲ್ಲ. ಸಕ್ಕರೆ ಮಿಶ್ರಣ ಮಾಡಿ ಜ್ಯೂಸ್​ ಮಾಡಿ ಸವಿಯುತ್ತಾರೆ. 201 ಗ್ರಾಂ ಆವಕಾಡೋದಲ್ಲಿ 4.01 ಗ್ರಾಂ ಪ್ರೋಟೀನ್ ಇರುತ್ತದೆ. ಅಲ್ಲದೆ, ಫೈಬರ್, ವಿಟಮಿನ್ ಇ ಮತ್ತು ಸಿ, ಮೆಗ್ನೀಶಿಯಂ ಹಾಗೂ ಫೋಲೇಟ್‌ ಸಮೃದ್ಧವಾಗಿವೆ.
ಹಲಸಿನ ಹಣ್ಣು: ಗಾತ್ರದಲ್ಲಿ ಎಲ್ಲ ಹಣ್ಣುಗಳಿಗಿಂತ ದೊಡ್ಡದಾಗಿರುವ ಈ ಹಣ್ಣಿನಲ್ಲಿ ಪ್ರತಿ ಕಪ್‌ಗೆ 2.84 ಗ್ರಾಂ ಪ್ರೋಟೀನ್ ಇರುತ್ತದೆ. ಅಲ್ಲದೆ, ಬಿ ಜೀವಸತ್ವಗಳು, ವಿಟಮಿನ್ ಸಿ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂಗಳಲ್ಲಿಯೂ ಸಮೃದ್ಧವಾಗಿವೆ. ಕ್ಯಾರೊಟಿನಾಯ್ಡ್ ಉತ್ಕರ್ಷಣ ನಿರೋಧಕಗಳೂ ಕೂಡ ಇವೆ.
ಪ್ಯಾಶನ್ ಫ್ರೂಟ್: 100 ಗ್ರಾಂ ಪ್ಯಾಶನ್ ಫ್ರೂಟ್​ನಲ್ಲಿ 2.2 ಗ್ರಾಂ ಪ್ರೋಟೀನ್ ಇರುತ್ತದೆ. ಅಲ್ಲದೆ, ವಿಟಮಿನ್ ಸಿ, ಕ್ಯಾರೊಟಿನಾಯ್ಡ್‌ಗಳು ಮತ್ತು ಪಾಲಿಫಿನಾಲ್ ಸಂಯುಕ್ತಗಳನ್ನು ಒಳಗೊಂಡಂತೆ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ.
ಬ್ಲ್ಯಾಕ್​ಬೆರೀಸ್​​: ಒಂದು ಕಪ್​ ಬ್ಲ್ಯಾಕ್‌ಬೆರಿ ಹಣ್ಣು 2 ಗ್ರಾಂ ಪ್ರೋಟೀನ್ ನೀಡುತ್ತದೆ. ಬ್ಲ್ಯಾಕ್‌ಬೆರಿಗಳು ಫೈಬರ್, ವಿಟಮಿನ್ ಸಿ ಮತ್ತು ಕೆ ಹಾಗೂ ಮ್ಯಾಂಗನೀಸ್‌ನ ಅತ್ಯುತ್ತಮ ಮೂಲವಾಗಿದೆ.
ರಾಸ್​ಬೆರಿಸ್​: ಒಂದು ಕಪ್ ರಾಸ್​ಬೆರಿ ಹಣ್ಣಿನಲ್ಲಿ 1.48 ಗ್ರಾಂ ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಹೊಂದಿರುತ್ತದೆ.
ಏಪ್ರಿಕಾಟ್: ಒಂದು ಕಪ್ ಏಪ್ರಿಕಾಟ್‌ 2.31 ಗ್ರಾಂ ಪ್ರೋಟೀನ್ ಹೊಂದಿರುತ್ತವೆ. ಒಣಗಿದ ಏಪ್ರಿಕಾಟ್‌ಗಳು ತಾಜಾ ಏಪ್ರಿಕಾಟ್‌ಗಳಿಗಿಂತ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ. ಪ್ರತಿ ಕಪ್‌ಗೆ 4.41 ಗ್ರಾಂ ಪ್ರೋಟೀನ್ ಇರುತ್ತದೆ.
ದಾಳಿಂಬೆ: ದಾಳಿಂಬೆ ಬೀಜಗಳು ಪ್ರತಿ ಕಪ್‌ಗೆ 2.9 ಗ್ರಾಂ ಪ್ರೋಟೀನ್ ಹೊಂದಿರುತ್ತವೆ. ಅಲ್ಲದೆ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳಲ್ಲಿಯೂ ಅಧಿಕವಾಗಿವೆ.
ಕಿವಿ: ಕಿವಿ ಹಣ್ಣನ್ನು ಸಾಮಾನ್ಯವಾಗಿ ಕಿವಿಸ್ ಎಂದು ಕರೆಯಲಾಗುತ್ತದೆ. ಇವು ಫೋಲೇಟ್ ಮತ್ತು ವಿಟಮಿನ್ ಸಿ, ಇ ಮತ್ತು ಕೆ ಪೋಷಕಾಂಶಗಳನ್ನು ಒಳಗೊಂಡಿದೆ. ಪ್ರತಿ ಕಪ್‌ಗೆ 2 ಗ್ರಾಂಗಿಂತ ಕಡಿಮೆ ಪ್ರೋಟೀನ್ ಅನ್ನು ಹೊಂದಿರುತ್ತವೆ.
ಚೆರ್ರಿ ಹಣ್ಣು: ಇತರ ಹಣ್ಣುಗಳಂತೆ ಚೆರ್ರಿಗಳಲ್ಲಿ ಪ್ರೋಟೀನ್ ಹೆಚ್ಚಿಲ್ಲ ಆದರೆ, 1 ಕಪ್ ಸಿಹಿ ಚೆರ್ರಿ ಹಣ್ಣು 1.63 ಗ್ರಾಂ ಪ್ರೋಟೀನ್ ನೀಡುತ್ತದೆ. ಚೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಇರುತ್ತವೆ.

ಯಾವ ವಯಸ್ಸಿನವರು ಎಷ್ಟು ಪ್ರೋಟೀನ್​ ಸೇವಿಸಬೇಕು?

ಯಾವ ವಯಸ್ಸಿನವರು ಎಷ್ಟು ಪ್ರೋಟೀನ್ ಸೇವಿಸಬೇಕು ಎಂಬುದು ದೇಹದ ತೂಕ, ಚಟುವಟಿಕೆ ಮಟ್ಟ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಭಾರತದ ICMR-NIN (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ರಾಷ್ಟ್ರೀಯ ಪೋಷಣಾ ಸಂಸ್ಥೆ) ಪ್ರಕಾರ, ಸಾಮಾನ್ಯ ಆರೋಗ್ಯವಂತ ವಯಸ್ಕರಿಗೆ ತಮ್ಮ ದೇಹದ ಒಂದು ಕೆಜಿ ತೂಕಕ್ಕೆ ಸುರಕ್ಷಿತ ಪ್ರೋಟೀನ್​ ಪ್ರಮಾಣ (RDA) 0.83 ಗ್ರಾಂ ಆಗಿದೆ. ಉದಾಹರಣೆಗೆ ಮಹಿಳೆಯರು 55 ಕೆ.ಜಿ ತೂಕವಿದ್ದರೆ, 46 ಗ್ರಾಂ ಹಾಗೂ ಪುರುಷರು 65 ಕೆ.ಜಿ ತೂಕವಿದ್ದರೆ 54 ಗ್ರಾಂ ಪ್ರೋಟೀನ್​ ಬೇಕಾಗುತ್ತದೆ. ಮಕ್ಕಳು ಮತ್ತು ಹದಿಹರೆಯದವರಿಗೆ ಸ್ವಲ್ಪ ಹೆಚ್ಚು ಬೇಕಾಗುತ್ತದೆ. ಉದಾಹರಣೆಗೆ 1 ರಿಂದ 3 ವರ್ಷದ ಮಕ್ಕಳಿಗೆ 12.5 ಗ್ರಾಂ ಹಾಗೂ 10 ರಿಂದ 12 ವರ್ಷದ ಮಕ್ಕಳಿಗೆ 32 ರಿಂದ 33 ಗ್ರಾಂ ಮತ್ತು 16 ರಿಂದ 18 ವರ್ಷ ಪುರುಷರಿಗೆ 55 ಗ್ರಾಂ ಪ್ರೋಟೀನ್​ ಬೇಕು. ಉಳಿದಂತೆ ಗರ್ಭಿಣಿಯರು ಮತ್ತು ಶಿಶುವಿಗೆ ಹಾಲುಣಿಸುವವರಿಗೆ ಹೆಚ್ಚುವರಿ 9 ರಿಂದ 22 ಗ್ರಾಂ ಬೇಕು. ವಯಸ್ಸಾದವರು ಅಂದರೆ, 65 ವರ್ಷಕ್ಕಿಂದ ಮೇಲ್ಪಟ್ಟವರಿಗೆ ಸ್ನಾಯು ಸವೆತವನ್ನು ತಡೆಗಟ್ಟಲು ದೇಹದ ಪ್ರತಿ ಕೆಜಿಗೆ 1 ರಿಂದ 1.2 ಗ್ರಾಂ ಪ್ರೋಟೀನ್​ ಅಗತ್ಯವಿದೆ ಎಂದು ICMR ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳು ಸೂಚಿಸುತ್ತವೆ.

ಹೆಚ್ಚಾಗಿ ಪ್ರೋಟೀನ್​ ತಿಂದರೆ ಏನಾಗುತ್ತದೆ?

ಹೆಚ್ಚಾಗಿ ಪ್ರೋಟೀನ್ ಸೇವಿಸಿದರೆ ದೇಹದಲ್ಲಿ ಅನೇಕ ದುಷ್ಪರಿಣಾಮಗಳು ಕಾಣಿಸಬಹುದು. ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಡಿಹೈಡ್ರೇಷನ್ ಅಥವಾ ನೀರಿನ ಕೊರತೆ, ಜೀರ್ಣಕ್ರಿಯಾ ಸಮಸ್ಯೆಗಳು ಹಾಗೂ ಹೃದಯರೋಗ ಅಪಾಯ ಹೆಚ್ಚಾಗಬಹುದು. ಅಲ್ಲದೆ, ಹೆಚ್ಚುವರಿ ಕ್ಯಾಲೋರಿಗಳು ಕೊಬ್ಬಾಗಿ ಪರಿವರ್ತನೆಯಾಗಿ ತೂಕ ಹೆಚ್ಚಾಗಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ತಲೆನೋವು ಕಾಣಿಸಬಹುದು.
ಅಂದಹಾಗೆ, ಈ ವರ್ಷದ ಪ್ರೋಟೀನ್ ದಿನದ ಆಶಯದಂತೆ ನಾವೆಲ್ಲರೂ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡಿಕೊಂಡು ಆರೋಗ್ಯಯುತವಾದ ಜೀವನವನ್ನು ನಡೆಸೋಣ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net