

Vaibhav Suryavanshi : ರಾಜಸ್ಥಾನದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಿನ್ನೆ (ಏಪ್ರಿಲ್ 29) ಇತಿಹಾಸ ನಿರ್ಮಾಣವಾಯಿತು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್ಗಳ ನೆರವಿನಿಂದ ಶತಕ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿನಿಂದ ಗೆಲುವಿನ ಹಳಿಗೆ ತಂದರು. ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ವಿಶ್ವ ಕ್ರಿಕೆಟ್ ಬೆರಗಾಗಿದೆ.
ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಮತ್ತು ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಬಾರಿಸಿದ ಭಾರತೀಯ ಮೊದಲ ಆಟಗಾರನೆಂಬ ಇತಿಹಾಸವನ್ನು ಸೂರ್ಯವಂಶಿ ನಿರ್ಮಿಸಿದ್ದಾರೆ. ಅಲ್ಲದೆ, ಐಪಿಎಲ್ನಲ್ಲೇ ಇದು ಎರಡನೇ ಅತ್ಯಂತ ವೇಗದ ಶತಕವಾಗಿದೆ. ಇದಕ್ಕೂ ಮುನ್ನ ಕ್ರಿಸ್ ಗೇಲ್ ಆರ್ಸಿಬಿ ಪರ ಆಡುವಾಗ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
ಬಿಹಾರದ ಸಮಷ್ಟಿಪುರದಿಂದ ತಮ್ಮ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದ ವೈಭವ್ ಸೂರ್ಯವಂಶಿ ಅವರ ಹಾದಿ ಸುಲಭವಾಗಿರಲಿಲ್ಲ. ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ವೈಭವ್ 12ನೇ ವಯಸ್ಸಿನಲ್ಲಿ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಭಾರತೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮುಂಚೂಣಿಗೆ ಬಂದರು.
ಅಂದಹಾಗೆ ವೈಭವ್, ತನ್ನ ನಾಲ್ಕನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರ ತಂದೆ ಸಂಜೀವ್ ಸೂರ್ಯವಂಶಿ, ವೈಭವ್ ಅವರ ಮೊದಲ ಕೋಚ್ ಆಗಿದ್ದರು. ಬಳಿಕ ಒಂಬತ್ತನೇ ವಯಸ್ಸಿನಲ್ಲಿ ಸ್ಥಳೀಯ ಕ್ರಿಕೆಟ್ ಅಕಾಡೆಮಿಯನ್ನು ಸೇರಿದರು. ಮಗನ ಕ್ರಿಕೆಟ್ ಆಕಾಂಕ್ಷೆಗಳನ್ನು ಬೆಂಬಲಿಸಲು ಅವರ ಕುಟುಂಬವು ತಮ್ಮ ಕೃಷಿ ಭೂಮಿಯನ್ನು ಮಾರಿತು. ಪ್ರತಿಯೊಂದು ಹಂತದಲ್ಲೂ ಇಡೀ ಕುಟುಂಬ ಮಗನ ಪರವಾಗಿ ನಿಂತಿತು. ಇದೀಗ ಆ ನಿರ್ಧಾರ ಸರಿಯಾಗಿದೆ ಎಂಬುದನ್ನು ವೈಭವ್ ಸಾಬೀತುಪಡಿಸಿದ್ದಾರೆ.
2024, ನವೆಂಬರ್ ತಿಂಗಳಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ ಆಡಿದಾಗ ಅವರು ಲಿಸ್ಟ್ ಎ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರರಾದರು. ಈ ಬಾರಿ ಐಪಿಎಲ್‌ಗೆ 14 ವರ್ಷ ಮತ್ತು 23 ದಿನಗಳ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದರು. ಐಪಿಎಲ್‌ನಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಮುರಿದರು. ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, 1.10 ಕೋಟಿ ರೂ.ಗೆ ಖರೀದಿಸಿತು. ನಾಯಕ ಸಂಜು ಸ್ಯಾಮ್ಸನ್ ಗಾಯದ ಕಾರಣ ಹೊರಗುಳಿದ ನಂತರ ಏಪ್ರಿಲ್ 19 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಆರಂಭಿಕ ಆಟಗಾರನಾಗಿ ಪಾದರ್ಪಣೆ ಮಾಡಿದರು.
ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ವೈಭವ್ ಐಪಿಎಲ್‌ನಲ್ಲಿ ಭರ್ಜರಿ ಆರಂಭ ಮಾಡಿದರು. ಒಂಬತ್ತನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸೂರ್ಯವಂಶಿ ಔಟಾದಾಗ, ರಾಜಸ್ಥಾನ ರಾಯಲ್ಸ್ 85 ರನ್ ಗಳಿಸಿತ್ತು. ಐಡೆನ್ ಮಾರ್ಕ್ರಾಮ್ ಔಟ್ ಆದ ನಂತರ ಸೂರ್ಯವಂಶಿ ದುಃಖದಿಂದ ಅಳುತ್ತಾ ಮೈದಾನದಿಂದ ಹೊರನಡೆಯುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಇದೀಗ ಮೂರನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾರೆ.
ಪಂದ್ಯದ ವಿಚಾರಕ್ಕೆ ಬಂದರೆ, ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ನಾಯಕ ಶುಭಮಾನ್ ಗಿಲ್ (84 ರನ್, 50 ಎಸೆತ, 5 ಬೌಂಡರಿ, 4 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ಸ್ಲಾಗ್ ಓವರ್‌ಗಳಲ್ಲಿ ಜೋಸ್ ಬಟ್ಲರ್ (50* ರನ್, 26 ಎಸೆತ, 3 ಬೌಂಡರಿ, 4 ಸಿಕ್ಸರ್) ಬಿರುಸಿನಾಟದ ಬಲದಿಂದ 4 ವಿಕೆಟ್‌ಗೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಬಿಹಾರದ 14 ವರ್ಷದ ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ (70* ರನ್, 40 ಎಸೆತ, 9 ಬೌಂಡರಿ, 2 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ ರಾಜಸ್ಥಾನ ತಂಡ 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್‌ಗಳಿಸಿ ಗೆದ್ದು ಬೀಗಿತು. 3 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಪರಾಗ್ 25 ಎಸೆತ ಇರುವಂತೆಯೇ ಗೆಲುವು ಸಾರಿದರು. (ಏಜೆನ್ಸೀಸ್)