

ಬೆಂಗಳೂರು: ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ಗಳಿಲ್ಲ, ವೆಂಟಿಲೇಟರ್ ಕೊರತೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈ ಸಮಸ್ಯೆಗೆ ಸ್ವಯಂ ಪ್ರೇರಿತ ಲಾಕ್ಡೌನ್ ಒಂದೇ ಪರಿಹಾರ ಎಂದಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳಿಗೆ ಕೋವಿಡ್19 ನಿಂದ ಪಾರಾಗಲು ಉಳಿದಿರುವುದು ಒಂದೇ ಒಂದು ದಾರಿ ಎಂದರೆ, ಮನೆಯಲ್ಲೇ ಉಳಿದು ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತ ಹಣ ಮುಖ್ಯವಲ್ಲ. ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ-ಜೀವನ ನಿಮ್ಮ ಕೈಯಲ್ಲೇ ಇದೆ. ರಾಜ್ಯ ಸರ್ಕಾರ ಕೂಡ ಪರೋಕ್ಷವಾಗಿ ಇದನ್ನೇ ಹೇಳುತ್ತಿದೆ. ಕರೊನಾ ವೈರಸ್ ಸಮೂಹ ಪ್ರಸರಣದ ಈಗಿನ ಸ್ಥಿತಿಯಲ್ಲಿ ಮನೆಯಲ್ಲಿರುವುದೇ 'ಮನೆ ಮದ್ದು' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿರಿ ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್ ಲಾಕ್ಡೌನ್?
ಈ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ನಿಗದಿಪಡಿಸಿರುವುದು ದಿನಕ್ಕೆ 10-15 ಸಾವಿರ ರೂಪಾಯಿ. ಈ ದರ ಬಡವರಿಗಿರಲಿ, ಮೇಲ್ಮಧ್ಯಮ ವರ್ಗದವರಿಗೂ ಭರಿಸಲು ಸಾಧ್ಯವಾಗದು ಎಂದು ಎಚ್ಡಿಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ಕುಟುಂಬದ ನಾಲ್ಕು ಜನರಿಗೆ ಕರೊನಾ ಬಂದರೆ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿರುವ ದರದ ಪ್ರಕಾರ 5-6 ಲಕ್ಷ ರೂ. ಬೇಕು. ಬಡವರು ಮಧ್ಯಮ ವರ್ಗದವರು ಎಲ್ಲಿಂದ ತರುತ್ತಾರೆ? ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ನಮ್ಮ ಜೀವ ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಜಾಗ್ರತೆಯಿಂದ ಇರಿ. ಇದು ರಾಜ್ಯದ ಜನತೆಗೆ ನನ್ನ ಕಳಕಳಿಯ ಮನವಿ ಎಂದು ಕುಮಾರಸ್ವಾಮಿ ಕೋರಿದ್ದಾರೆ.