

Virat Kohli : ರಣಜಿ ಟ್ರೋಫಿಯ ಅಂತಿಮ ಸುತ್ತಿನ ಲೀಗ್ ಪಂದ್ಯದ ಭಾಗವಾಗಿ ಗುರುವಾರ (ಜ.30) ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ಮತ್ತು ದೆಹಲಿ ತಂಡಗಳ ನಡುವಿನ ಪಂದ್ಯಕ್ಕೆ ಪ್ರೇಕ್ಷಕರಿಂದ ಅಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಾಮಾನ್ಯವಾಗಿ ರಣಜಿ ಪಂದ್ಯ ನಡೆಯುವಾಗ ಇತ್ತೀಚಿನ ದಿನಗಳಲ್ಲಿ, ಪಂದ್ಯವನ್ನು ವೀಕ್ಷಿಸಲು ನೂರು ಪ್ರೇಕ್ಷಕರನ್ನು ಪಡೆಯುವುದು ಕೂಡ ಕಷ್ಟ. ಆದರೆ, ಗುರುವಾರ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣ ಮಾತ್ರ ತುಂಬಿ ತುಳುಕುತ್ತಿತ್ತು. ಎಲ್ಲಿ ನೋಡಿದರೂ ಜನರಿದ್ದರು. ರಣಜಿ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.
ದೀರ್ಘಕಾಲದಿಂದ ದೇಶೀಯ ಕ್ರಿಕೆಟ್‌ನಿಂದ ದೂರವಿದ್ದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, 2012ರ ನಂತರ ಮೊದಲ ಬಾರಿಗೆ ದೆಹಲಿ ತಂಡಕ್ಕಾಗಿ ರಣಜಿ ಪಂದ್ಯವನ್ನು ಆಡಿದ್ದರಿಂದ ಅಭಿಮಾನಿಗಳು ರೋಮಾಂಚನಗೊಂಡರು. ಅಲ್ಲಿ ಸೇರಿದ್ದ ಭಾರೀ ಜನಸ್ತೋಮವೇ ಕೊಹ್ಲಿ ಕ್ರೇಜ್ ಏನು ಎಂಬುದಕ್ಕೆ ಸಾಕ್ಷಿಯಾಯಿತು.
ಪಂದ್ಯ ಆರಂಭವಾಗುವ ಮೂರು ಗಂಟೆಗಳ ಮೊದಲೇ ಸರತಿ ಸಾಲುಗಳು ಭರ್ತಿಯಾಗಿದ್ದವು. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (ಡಿಡಿಸಿಎ) ಮಾಡಿದ ವ್ಯವಸ್ಥೆಗಳನ್ನು ಮೀರಿ ಪ್ರೇಕ್ಷಕರು ಮೈದಾನಕ್ಕೆ ಜಮಾಯಿಸಿದರು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಮೊದಲೇ ಅಂದಾಜಿಸಿದ್ದ ಡಿಡಿಸಿಎ, ಕ್ರೀಡಾಂಗಣದಲ್ಲಿ 6,000 ಸಾಮರ್ಥ್ಯದ 'ಗೌತಮ್ ಗಂಭೀರ್ ಸ್ಟ್ಯಾಂಡ್' ಅನ್ನು ತೆರೆಯಿತು. ಆದರೆ, ಅದು ಅಲ್ಪಾವಧಿಯಲ್ಲಿಯೇ ಭರ್ತಿಯಾಯಿತು ಮತ್ತು ಸಣ್ಣ ಕಾಲ್ತುಳಿತವೂ ಸಂಭವಿಸಿತು.
ಅದೇ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮೈದಾನದ ಹೊರಗೆ ನಡೆಯುತ್ತಿತ್ತು. ಹೀಗಾಗಿ ಜಾಗೃತ ಭದ್ರತಾ ಸಿಬ್ಬಂದಿ 11,000 ಸಾಮರ್ಥ್ಯದ 'ಬಿಷನ್ ಸಿಂಗ್ ಬೇಡಿ ಸ್ಟ್ಯಾಂಡ್' ಒಳಗೆ ಅಭಿಮಾನಿಗಳಿಗೆ ಅವಕಾಶ ನೀಡಿದರು. ಮೊದಲ ದಿನ 27,000 ಕ್ಕೂ ಹೆಚ್ಚು ಪ್ರೇಕ್ಷಕರು ಹಾಜರಿದ್ದರು ಎಂದು ವರದಿಯಾಗಿದೆ.
ರಣಜಿ ಟ್ರೋಫಿಯಲ್ಲಿ ನಾನು ಹಿಂದೆಂದೂ ಇಷ್ಟೊಂದು ಉತ್ಸಾಹವನ್ನು ಕಂಡಿಲ್ಲ. ದೇಶೀಯ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಈ ಮಟ್ಟಕ್ಕೆ ಬರುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಇದೆಲ್ಲವೂ ಒಬ್ಬ ವ್ಯಕ್ತಿಗೆ ಮಾತ್ರ. ಬಂದವರೆಲ್ಲರೂ ಕೊಹ್ಲಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ನಾನು 30 ವರ್ಷಗಳಿಂದ ದೆಹಲಿ ಕ್ರಿಕೆಟ್ ನೋಡುತ್ತಿದ್ದೇನೆ. ಆದರೆ, ರಣಜಿ ಟ್ರೋಫಿಯಲ್ಲಿ ಇಂತಹ ದೃಶ್ಯಗಳನ್ನು ನಾನು ಎಂದಿಗೂ ನೋಡಿಲ್ಲ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಕಾರ್ಯದರ್ಶಿ ಅಶೋಕ್ ಶರ್ಮ ಹೇಳಿದರು.
ಇದು ಕೊಹ್ಲಿಯ ಕ್ರೇಜ್ಗೆ ಸಾಕ್ಷಿಯಾಗಿದೆ. ಆರಂಭದಲ್ಲಿ ನಾವು ಅಭಿಮಾನಿಗಳಿಗೆ ಒಂದು ಗೇಟ್ ಮೂಲಕ ಅವಕಾಶ ನೀಡುತ್ತಿದ್ದೆವು. ನಂತರ, ಪರಿಸ್ಥಿತಿಗೆ ಅನುಗುಣವಾಗಿ, ನಾವು ಮೈದಾನದ ಎಲ್ಲಾ ಗೇಟ್‌ಗಳನ್ನು ತೆರೆದಿದ್ದೇವೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದ ಕೊನೆಯ ರಣಜಿ ಪಂದ್ಯವನ್ನು 8,000 ಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದರು. ಇದೇ ಇದುವರೆಗಿನ ದಾಖಲೆ. ಗುರುವಾರ ನಡೆದ ರೈಲ್ವೇಸ್-ದೆಹಲಿ ಪಂದ್ಯವನ್ನು ವೀಕ್ಷಿಸಲು 27,000 ಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು ಎಂದು ಅಶೋಕ್ ಶರ್ಮ ತಿಳಿಸಿದರು. (ಏಜೆನ್ಸೀಸ್)