ಆನ್​ಲೈನ್ ಉಗ್ರರ ಮೇಲೆ ಎನ್​ಐಎ! ಯುವಕರ ಸೆಳೆಯಲು ಟೆಲಿಗ್ರಾಂ, ಸಿಗ್ನಲ್​, ವೈಬರ್​ ಬಳಕೆ, 325 ಶಂಕಿತರು ಸೆರೆ

NIA
Published on

ಕೀರ್ತಿನಾರಾಯಣ ಸಿ. ಬೆಂಗಳೂರು

ಭಾರತದಲ್ಲಿ 2047ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆ ಜಾರಿಗೆ ತರಬೇಕೆಂಬ ಅಜೆಂಡಾದೊಂದಿಗೆ ಉಗ್ರ ಸಂಘಟನೆಗಳನ್ನು ಬಲಪಡಿಸಲು ‘ಆನ್​ಲೈನ್ ಟೆರರಿಸಂ’ ಜಾಲಗಳು ಸಕ್ರಿಯವಾಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರವಾದ ಪ್ರಚಾರ ಮಾಡಿ, ಯುವಕರ ನೇಮಕಾತಿ ನಡೆಸುತ್ತಿರುವವರನ್ನು ಬಲೆಗೆ ಕೆಡವುವ ಕಾರ್ಯಾಚರಣೆ ಆರಂಭಿಸಿದೆ. ಎನ್ಕ್ರಿಪ್ಟೆಡ್ ವಾಟ್ಸ್​ಆಪ್ ಜತೆಗೆ ಸಂದೇಶ ಕಳುಹಿಸಲು ಅತಿಸುರಕ್ಷಿತ ಅಪ್ಲಿಕೇಷನ್​ಗಳೆನ್ನಲಾದ ಸಿಗ್ನಲ್, ಟೆಲಿಗ್ರಾಂ, ವೈಬರ್ ಹಾಗೂ ಡಾರ್ಕ್​ವೆಬ್​ಗಳನ್ನು ಉಗ್ರವಾದ ಪ್ರಚಾರ ಹಾಗೂ ಸಮಾನ ಮನಸ್ಕರ ಸಂಪರ್ಕಕ್ಕೆ ಬಳಸಲಾಗುತ್ತಿದೆ. ಇದನ್ನು ಪತ್ತೆಹಚ್ಚುವುದೇ ಭದ್ರತಾ ಸಂಸ್ಥೆಗಳಿಗೆ ಸವಾಲಾಗಿದೆ. ಅಮಾಯಕರು, ಖಿನ್ನತೆಗೆ ಒಳಗಾದವರು ಹಾಗೂ ಕುಟುಂಬಗಳಿಂದ ದೂರಾಗಿರುವ ಯುವಕರನ್ನೇ ಟಾರ್ಗೆಟ್ ಮಾಡಿ, ಅವರ ಮನಃಪರಿವರ್ತಿಸಿ ಉಗ್ರ ಸಂಘಟನೆಗಳಿಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಿವೆ.

ಆನ್​ಲೈನ್ ಟೆರರಿಸಂ ಪತ್ತೆ ಉದ್ದೇಶದಿಂದಲೇ ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಗಸ್ತು ಹೆಚ್ಚಿಸಲಾಗಿದೆ. ಕೋಮುವಾದ ಮೂಡಿಸುವ ಹಾಗೂ ಭಾರತವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ವೆಬ್​ಸೈಟ್​ಗಳು ಹಾಗೂ ಖಾತೆಗಳನ್ನು ಗುರುತಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅನ್ವಯ 2024ರ ಅಕ್ಟೋಬರ್​ವರೆಗೆ 9845 ಯುಆರ್​ಎಲ್​ಗಳನ್ನು ಬ್ಲಾಕ್ ಮಾಡಿ ಆದೇಶಿಸಿದೆ.

ದೇಶದಲ್ಲಿ ನಡೆದಿರುವ ಉಗ್ರ ಕೃತ್ಯ ಸಂಬಂಧ 2024ರ ಡಿ.5ರವರೆಗೆ 640 ಪ್ರಕರಣಗಳನ್ನು ಎನ್​ಐಎ ದಾಖಲಿಸಿದೆ. ಇದರಲ್ಲಿ 109 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. 395 ಕೇಸ್​ಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. 4174 ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಈ ಪೈಕಿ 595 ಉಗ್ರರಿಗೆ ಜೈಲುಸಜೆಯಾಗಿದೆ. ಇದಲ್ಲದೆ ಪ್ರತ್ಯೇಕವಾಗಿ ಆನ್​ಲೈನ್ ಟೆರರಿಸಂಗೆ ಸಂಬಂಧಪಟ್ಟಂತೆ 67 ಪ್ರಕರಣಗಳ ತನಿಖೆಯನ್ನು ಎನ್​ಐಎ ನಡೆಸುತ್ತಿದೆ. ಇದರಲ್ಲಿ 325 ಶಂಕಿತ ಉಗ್ರರನ್ನು ಬಂಧಿಸಿದ್ದು, 336 ಶಂಕಿತರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಎನ್​ಐಎ ವಿಶೇಷ ನ್ಯಾಯಾಲಯ 63 ಅಪರಾಧಿಗಳಿಗೆ ಜೈಲುಶಿಕ್ಷೆ ವಿಧಿಸಿದೆ. ಶೀಘ್ರವಾಗಿ ಭಯೋತ್ಪಾದನಾ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿ, ಇತ್ಯರ್ಥಪಡಿಸಲು ದೇಶದಲ್ಲಿ 51 ಎನ್​ಐಎ ವಿಶೇಷ ಕೋರ್ಟ್ ಸ್ಥಾಪಿಸಲಾಗಿದೆ. ಉಗ್ರ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸಲಾಗುತ್ತಿದೆ.

109 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ: ಎನ್​ಐಎ ಕೈಗೆತ್ತಿಕೊಂಡಿರುವ ಉಗ್ರ ಕೃತ್ಯ ಪ್ರಕರಣಗಳಲ್ಲಿ ಬಂಧಿತರಿಗೆ ಶಿಕ್ಷೆ ಪ್ರಮಾಣ ಶೇ.95.23 ಇದೆ. 2024ರ ಡಿ.5ರವರೆಗೆ 640 ಉಗ್ರ ಕೃತ್ಯ ಪ್ರಕರಣ ದಾಖಲಾಗಿವೆ. 147 ಪ್ರಕರಣಗಳಲ್ಲಿ ಎನ್​ಐಎ ತನಿಖೆ ಪೂರ್ಣಗೊಂಡಿದ್ದು, ಉಗ್ರರ ಕೃತ್ಯವೆಂದು ದೃಢಪಟ್ಟಿದೆ. ಕಾನೂನು ಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ (ಯುಎಪಿಎ) ಅನ್ವಯ 140 ಪ್ರಕರಣಗಳು ಉಗ್ರರಿಗೆ ಜೈಲುಶಿಕ್ಷೆಯಾಗುವ ಮೂಲಕ ಮುಕ್ತಾಯಗೊಂಡಿವೆ. ಇದೇ ವೇಳೆ ಎನ್​ಐಎ ಅಧಿಕಾರಿಗಳು 543 ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ಇದರ ಒಟ್ಟು ಮೌಲ್ಯ 109 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟಾವರ್ಸ್ ಮೇಲೂ ಉಗ್ರ ಕಣ್ಣು!: ಮೆಟಾವರ್ಸ್ ವ್ಯವಸ್ಥೆಯನ್ನೂ ಉಗ್ರರು ಬಳಸಿಕೊಳ್ಳುವ ಬಗ್ಗೆ 2024 ಜನವರಿಯಲ್ಲೇ ಇಂಟರ್​ಪೋಲ್ ಶ್ವೇತಪತ್ರ ಹೊರಡಿಸಿತ್ತು. ಹೊಸ ಸದಸ್ಯರ ನೇಮಕ, ಉಗ್ರವಾದ ಪ್ರಚಾರ, ತರಬೇತಿ ಹಾಗೂ ವ್ಯಕ್ತಿಗತವಾಗಿ ಉಗ್ರವಾದ ಉಪದೇಶ ಬೋಧಿಸಲು ಮೆಟಾವರ್ಸ್ ಬಳಸಿಕೊಳ್ಳುವ ಬಗ್ಗೆ ಇಂಟರ್​ಪೋಲ್ ಎಚ್ಚರಿಕೆ ನೀಡಿತ್ತು.

ಭಯೋತ್ಪಾದನೆ ಹೇಗೆ?

  • ಮೊದಲೆಲ್ಲ ಉಗ್ರ ಸಂದೇಶ ಸ್ಲೀಪರ್ ಸೆಲ್/ಏಜೆಂಟ್ ಮುಖಾಂತರ ರವಾನೆ
  • ಈಗ ಪತ್ತೆ ಸಾಧ್ಯವಾಗದಂತೆ ಟೆಲಿಗ್ರಾಂ, ಸಿಗ್ನಲ್, ಡಾರ್ಕ್​ನೆಟ್​ನಲ್ಲಿ ಪ್ರಚಾರ
  • ಕುಟುಂಬ ತೊರೆದಿರುವ ಮುಗ್ಧರು, ಖಿನ್ನತೆ ಇರುವ ಯುವಕರೇ ಟಾರ್ಗೆಟ್
  • ಧರ್ಮದ ಹೆಸರಲ್ಲಿ ಜಿಹಾದಿ ಉಪದೇಶ ನೀಡಿ ಯುವಕರ ಮೈಂಡ್ ವಾಶ್
  • 20-30 ವರ್ಷ ವಯಸ್ಸಿನ ಯುವಕರನ್ನೇ ಗುರಿಯಾಗಿಸಿ ಕಾರ್ಯಾಚರಣೆ
  • ಕ್ರಿಪ್ಟೋ ಕರೆನ್ಸಿ, ಹವಾಲಾ ದಂಧೆ ಮೂಲಕ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಿಕೆ
  • ಧಾರ್ವಿುಕ ವಿಚಾರಗಳನ್ನೇ ಪದೇಪದೆ ಪೋಸ್ಟ್ ಮಾಡಿ ಮನ ಪರಿವರ್ತನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net