ಕೊಹ್ಲಿ, ಬುಮ್ರಾ ಅಲ್ಲವೇ ಅಲ್ಲ... ಎಬಿಡಿ ಪ್ರಕಾರ ಚಾಂಪಿಯನ್ಸ್ ಟ್ರೋಫಿಗೆ ಈತನೇ ಪ್ರಮುಖ ಅಸ್ತ್ರ! AB de Villiers

AB de Villiers
Published on

AB de Villiers : 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದ್ದ ಟೀಮ್ ಇಂಡಿಯಾ, ಕೀನ್ಯಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಸ್ಥಾನ ಪಡೆಯಿತು. ಇದಾದ ಬಳಿಕ 2002ರಲ್ಲಿ ಶ್ರೀಲಂಕಾ ಜೊತೆ ಜಂಟಿ ವಿಜೇತರಾದರು. ನಂತರ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ, ಭಾರತ ತಂಡ 2013ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ, ಭಾರತ ಕೇವಲ ಐದು ರನ್‌ಗಳಿಂದ ಗೆಲುವು ಸಾಧಿಸಿತು. ಈ ರೋಮಾಂಚಕಾರಿ ಪಂದ್ಯದಲ್ಲಿ ಭಾರತ ಏಕಾಂಗಿಯಾಗಿ ಪ್ರಶಸ್ತಿ ಗೆದ್ದಿತು. ಇದಾದ ನಾಲ್ಕು ವರ್ಷಗಳ ನಂತರ ಮತ್ತೆ ಫೈನಲ್ ತಲುಪಿದರು. ಆದರೆ, ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋಲುಂಡಿತು. ಇದೀಗ ಭಾರತ ಈ ಮೆಗಾ ಟೂರ್ನಮೆಂಟ್ ಮತ್ತೊಮ್ಮೆ ಗೆಲ್ಲುವ ಅವಕಾಶವನ್ನು ಪಡೆದುಕೊಂಡಿದೆ.

ಸುಮಾರು ಎಂಟು ವರ್ಷಗಳ ನಂತರ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ನೆಚ್ಚಿನ ತಂಡಗಳಲ್ಲಿ ಒಂದಾಗಿ ಕಣಕ್ಕೆ ಇಳಿಯುತ್ತಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಈ ಮೆಗಾ ಈವೆಂಟ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ತಂಡವನ್ನು ಘೋಷಿಸಿದೆ. 2012ರ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ರೋಹಿತ್ ಶರ್ಮ ಈ ಬಾರಿ ನಾಯಕನಾಗಿ ಕಣಕ್ಕೆ ಇಳಿಯಲಿದ್ದಾರೆ.

ಮತ್ತೊಂದೆಡೆ, ಆಗಿನ ನಾಯಕ ವಿರಾಟ್ ಕೊಹ್ಲಿ ಜೊತೆಗೆ, ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಮತ್ತು ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಇತ್ತೀಚಿನ ತಂಡದಲ್ಲಿ ಸೇರಿಸಲಾಗಿದೆ. ಈ ಸಂದರ್ಭದಲ್ಲಿ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಎಬಿ ಡಿವಿಲಿಯರ್ಸ್ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಈ ಬಾರಿ ಟೀಮ್ ಇಂಡಿಯಾದ 'ಎಕ್ಸ್' ಫ್ಯಾಕ್ಟರ್ ಅಂದ್ರೆ ಪ್ರಮುಖ ಆಟಗಾರ ಯಾರು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮೇಲಿನ ಆರೂ ಜನರಲ್ಲಿ ಯಾರನ್ನೂ ಎಬಿಡಿ ಹೆಸರಿಸಲಿಲ್ಲ. ಬದಲಾಗಿ, ಸ್ಪಿನ್ನರ್ ಕುಲದೀಪ್ ಯಾದವ್ ಅವರ ಮೇಲೆ ಎಬಿಡಿ ನಂಬಿಕೆ ಇಟ್ಟಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಈ ಬಾರಿ ಭಾರತ ತಂಡದಲ್ಲಿ ಕುಲದೀಪ್ ಯಾದವ್ 'ಎಕ್ಸ್' ಫ್ಯಾಕ್ಟರ್ ಆಗಲಿದ್ದಾರೆ ಎಂದಿದ್ದಾರೆ.

ಟೀಮ್ ಇಂಡಿಯಾ ದುಬೈನಲ್ಲಿ ತಮ್ಮ ಪಂದ್ಯಗಳನ್ನು ಆಡಲಿದೆ. ಅಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಸ್ವಲ್ಪ ಹೆಚ್ಚು ಅನುಕೂಲಕರವಾಗಿವೆ. ಆದ್ದರಿಂದ ಕುಲ್‌ದೀಪ್ ಈ ಬಾರಿ ಭಾರತ ಪರ ಎಲ್ಲರಿಗಿಂತ ಉತ್ತಮವಾಗಿ ಆಡಬಹುದು ಮತ್ತು ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದು. ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಗಾಯದ ಕಾರಣದಿಂದಾಗಿ ಕುಲದೀಪ್​ ಯಾದವ್ ಕೆಲವು ಸಮಯದಿಂದ ಭಾರತೀಯ ತಂಡದಿಂದ ಹೊರಗುಳಿದಿದ್ದಾರೆ. ದೀರ್ಘಕಾಲದವರೆಗೆ ಎಡ ತೊಡೆಸಂದು ನೋವಿನಿಂದ ಬಳಲುತ್ತಿರುವ ಸ್ಪಿನ್ ಬೌಲರ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಗಾಯದಿಂದಾಗಿಯೇ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಕುಲದೀಪ್​ ಯಾದವ್ ಭಾರತ ತಂಡಕ್ಕೆ ಮರಳುವ ಸಾಧ್ಯತೆಯಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ

ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್ (ಉಪನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net