

ಲಖನೌ: ಬಹಳ ಸಂಚಲನ ಸೃಷ್ಟಿಸಿದ್ದ ಹಾಥರಸ್ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಯ ಪತ್ನಿ ಶನಿವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿಯೇ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪುಷ್ಪಾ ದೇವಿ (36) ಅವರ ಶವ ಪತ್ತೆಯಾಗಿದೆ. ಇವರು ಉನ್ನಾವೋದ ಪೊಲೀಸ್ ಟ್ರೇನಿಂಗ್ ಸೆಂಟರ್ನ ಡಿಐಜಿ ಚಂದ್ರಪ್ರಕಾಶ್ ಅವರ ಪತ್ನಿ. ಹಾಥರಸ್ನಲ್ಲಿ ಕಳೆದ ತಿಂಗಳು ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ ಮೂವರು ಸದಸ್ಯರ ಪೈಕಿ ಚಂದ್ರ ಪ್ರಕಾಶ್ ಒಬ್ಬರು.
ಆತ್ಮಹತ್ಯೆ ಮಾಡಿಕೊಂಡದ್ದೇಕೆ ಎಂಬುದಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಆತ್ಮಹತ್ಯಾ ಪತ್ರವೂ ಸ್ಥಳದಲ್ಲಿ ಸಿಕ್ಕಿಲ್ಲ. ಹೀಗಾಗಿ ಪ್ರಕರಣ ಕಗ್ಗಂಟಾಗಿ ಉಳಿದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)