ಅಯ್ಯೋ ದುರ್ವಿಧಿಯೇ! ತೋಟದಲ್ಲಿ ಕೆಲಸ ಮಾಡುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು

Hassan Boy
Published on

ಹಾಸನ: ತೆಂಗಿನಕಾಯಿಯ ಗೊನೆ ಬಿದ್ದು ಬಾಲಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಬಿ.ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಜ್ವಲ್ (16) ಮೃತ ಬಾಲಕ. ಶ್ರವಣಬೆಳಗೊಳ ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಪ್ರಜ್ವಲ್ ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ.

ಭಾರೀ ಮಳೆ, ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದವು. ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ತೆಂಗಿನಮರದಿಂದ ಬಾಲಕನ ಮೇಲೆ ತೆಂಗಿನಕಾಯಿ ಗೊನೆ ಬಿದ್ದಿದೆ. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಮೃತ ಪ್ರಜ್ವಲ್​, ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಇದೀಗ ಮಗನನ್ನು ಕಳೆದುಕೊಂಡ ಪಾಲಕರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಮಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net