'ಪುಷ್ಪ 2' ಚಿತ್ರದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ನಿಜ ಏನು?

Rashmika - Saipallavi
Published on

ಹೈದರಾಬಾದ್​: ಇಂಥದ್ದೊಂದು ಸುದ್ದಿ ಕೇಳಿಬರುತ್ತಿರುವುದು ಇದು ಮೊದಲೇನಲ್ಲ. 'ಪುಷ್ಪ' ಬಿಡುಗಡೆಯಾಗಿ ಯಶಸ್ವಿಯಾಗುತ್ತಿದ್ದಂತೆಯೇ, ಅದರ ಮುಂದುವರೆದ ಭಾಗದಲ್ಲಿ ರಶ್ಮಿಕಾ ಇರುವುದಿಲ್ಲ ಎಂಬಂತಹ ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಚಿತ್ರತಂಡದವರಾಗಲೀ, ರಶ್ಮಿಕಾ ಆಗಲೀ ಈ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರಿಂದ, ಸುದ್ದಿ ತಣ್ಣಗಾಯ್ತು.

ಈಗ ಮತ್ತೊಮ್ಮೆ 'ಪುಷ್ಪ 2' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿಲ್ಲವಂತೆ ಎಂಬ ಸುದ್ದಿ ಕೇಳಿ ಬಂದಿದೆ. ಅಷ್ಟೇ ಅಲ್ಲ, ರಶ್ಮಿಕಾ ಬದಲು ಸಾಯಿ ಪಲ್ಲವಿ ಬರುತ್ತಾರಂತೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಆದರೆ, ಚಿತ್ರತಂಡದವರ್ಯಾರೂ ಈ ಬಗ್ಗೆ ಬಾಯಿಬಿಟ್ಟಿಲ್ಲ.

ರಶ್ಮಿಕಾ ಬದಲು ಸಾಯಿ ಪಲ್ಲವಿ ನಟಿಸುತ್ತಿರುವುದು ನಿಜವಾ? ಈ ಬಗ್ಗೆ ಟಾಲಿವುಡ್​ ಪಂಡಿತರು ತನಿಖೆ ಮಾಡಿದ್ದಾರೆ. ಅವರ ಪ್ರಕಾರ, ಸಾಯಿ ಪಲ್ಲವಿಗೆ ಚಿತ್ರದಲ್ಲೊಂದು ಪಾತ್ರವಿದೆಯಾದರೂ ಅದು ರಶ್ಮಿಕಾ ಪಾತ್ರವಲ್ಲವಂತೆ. ಅದೇ ಬೇರೆ, ಇದೇ ಬೇರೆ. ವಿಷಯವೇನೆಂದರೆ, ಚಿತ್ರದಲ್ಲಿ ಇನ್ನೊಂದು ಮಹಿಳಾ ಪಾತ್ರ ಬೇಕೆಂದೆನಿಸಿ, ನಿರ್ದೇಶಕ ಸುಕುಮಾರ್​ ಇನ್ನೊಂದು ಪಾತ್ರ ಸೃಷ್ಟಿ ಮಾಡಿದ್ದಾರಂತೆ. ಅದು ಬುಡಕಟ್ಟು ಹುಡುಗಿಯ ಪಾತ್ರ. ನಾಯಕ ಪುಷ್ಪನ ತಂಗಿಯಂತಿರುವ ಈ ಪಾತ್ರ ಚಿತ್ರದಲ್ಲೊಂದು ಪ್ರಮುಖ ಪಾತ್ರ ವಹಿಸುತ್ತದಂತೆ. ಈ ಪಾತ್ರವನ್ನು ಸಾಯಿ ಪಲ್ಲವಿ ಮಾಡಿದರೆ ಚೆಂದ ಎಂದನಿಸಿ, ಆಕೆಗೆ ಕಥೆ ಮತ್ತು ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆಯಂತೆ. ಸಾಯಿಪಲ್ಲವಿ, ನೋಡೋಣ ಎಂದಿದ್ದಾರಂತೆ. ಒಂದು ಪಕ್ಷ ಆಕೆ ಒಪ್ಪಿದರೆ, 'ಪುಷ್ಪ 2' ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರ ಇರಲಿದೆ.

ಇನ್ನು, 'ಪುಷ್ಪ' ಚಿತ್ರದಿಂದ ಉತ್ತೇಜಿತರಾಗಿರುವ ನಿರ್ದೇಶಕ ಸುಕುಮಾರ್​, ಮುಂದುವರೆದ ಭಾಗವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಅದ್ಧೂರಿಯಾಗಿ ಮಾಡಲು ಚಿಂತಿಸಿದ್ದು, ಈ ನಿಟ್ಟಿನಲ್ಲಿ ಚಿತ್ರಕಥೆ ಮಾಡಿದ್ದಾರಂತೆ. ಈಗಾಗಲೇ ಈ ಮುಂದುವರೆದ ಭಾಗದ ಚಿತ್ರೀಕರಣ ಶುರುವಾಗಿದ್ದು, ಮುಂದಿನ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net