ಸುದೀಪ್​ ಅಭಿನಯಿಸುತ್ತಿರುವ ಮುಂದಿನ ಚಿತ್ರ ಯಾವುದು ಗೊತ್ತಾ? ಇಲ್ಲಿದೆ ಡೀಟೇಲ್ಸ್​ …

Sudeep 7
Published on

ಬೆಂಗಳೂರು: 'ವಿಕ್ರಾಂತ್​ ರೋಣ' ನಂತರ ಸುದೀಪ್​ ಅವರ ಮುಂದಿನ ನಡೆ ಏನು? ಅವರು ಯಾವ ಚಿತ್ರದಲ್ಲಿ ನಟಿಸಬಹುದು? ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಆ ಪ್ರಶ್ನೆಗಳಿಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ. ಸುದೀಪ್​ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದುಕ್ಕೆ ಸಜ್ಜಾಗಿದ್ದಾರೆ. ಆದರೆ, ಪೂರ್ಣಪ್ರಮಾಣದಲ್ಲಲ್ಲ, ಅತಿಥಿ ಪಾತ್ರದಲ್ಲಿ.

ಪ್ರದೀಪ್ ಯಾದವ್ ನಿರ್ಮಾಣದ ಸಿ ಎಂ ವಿಜಯ್ ನಿರ್ದೇಶನದ 'ಉಸಿರೇ ಉಸಿರೇ' ಚಿತ್ರಕ್ಕೆ ಸುದೀಪ್​ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ನಟಿಸುತ್ತಿರುವುದಕ್ಕೆ ಮುಖ್ಯ ಕಾರಣ, ಅವರ ಸ್ನೇಹಿತ ಕಂ ಕ್ರಿಕೆಟಿಗ ಕಂ 'ಬಿಗ್​ ಬಾಸ್​' ಸ್ಪರ್ಧಿ ರಾಜೀವ್​.

ಸುದೀಪ್​ ಮತ್ತು ರಾಜೀವ್​ ಬಹಳ ವರ್ಷಗಳ ಸ್ನೇಹಿತರು. 'ಉಸಿರೇ ಉಸಿರೇ' ಚಿತ್ರದಲ್ಲಿ ರಾಜೀವ್​ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿ ನಟಿಸುತ್ತಿದ್ದು, ಸ್ನೇಹಿತನಿಗಾಗಿ ಸುದೀಪ್​ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡದವರು ಸುದೀಪ್​ ಅವರನ್ನು ಚಿತ್ರದಲ್ಲಿ ನಟಿಸುವುದಕ್ಕೆ ಸಂಪರ್ಕಿಸಿದ್ದು, ಸುದೀಪ್​ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಉಸಿರೇ ಉಸಿರೇ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈಗ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ರಾಜೀವ್​ಗೆ ನಾಯಕಿಯಾಗಿ ಶ್ರೀಜಿತಾ ನಟಿಸುತ್ತಿದ್ದು, ಮಿಕ್ಕಂತೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧು ಕೋಕಿಲ, ದೇವರಾಜ್ ಮುಂತಾದವರು ನಟಿಸಿದ್ದಾರೆ. ಮನು ಛಾಯಾಗ್ರಹಣ ಮತ್ತು ವಿವೇಕ್ ಚಕ್ರವರ್ತಿಯ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net