

ಹೈದರಾಬಾದ್: ಸಲಾರ್ ಯಶಸ್ಸಿನ ಗುಂಗಿನಲ್ಲಿರುವ ಯಂಗ್ ರೆಬೆಲ್ಸ್ಟಾರ್ ಪ್ರಭಾಸ್ ಕಳೆದ ಕೆಲ ದಿನಗಳಿಂದ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರಭಾಸ್ ಬಳಿಕ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು.
ಕೆಲ ದಿನಗಳ ಹಿಂದೆ ಶಾಸಕ ಚಿರ್ಲಾ ಜಗ್ಗಿರೆಡ್ಡಿ ನಟ ಪ್ರಭಾಸ್ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ನಟನ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು. ಈ ಕುರಿತಾಗಿ ನಟ ಪ್ರಭಾಸ್ ಸ್ಪಷ್ಟನೆ ನೀಡಿದ್ದು, ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಟ ಪ್ರಭಾಸ್ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತರಿಉವ ರಾಮಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ಹಾಗೂ ಉದ್ಘಾಟನೆಯ ದಿನದಂದು ಊಟದ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ನಟ ಪ್ರಭಾಸ್ ಆಪ್ತರೊಬ್ಬರು ಈ ಎಲ್ಲಾ ಸುದ್ದಿಗಳನ್ನು ಅಲ್ಲಗೆಳೆದಿದ್ದು, ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸುದ್ದಿಗಳು ಹರದಾಡುತ್ತಿದ್ದು, ಅದೆಲ್ಲಾ ಸುಳ್ಳು ಸುದ್ದಿಯಾಗಿದೆ. ನಟ ಪ್ರಭಾಸ್ ಅವರು ಯಾವುದೇ ದೇಣಿಗೆ ಅಥವಾ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವುದಾಗಿ ಎಲ್ಲಿಯೂ ಹೇಳಿಲ್ಲ ಮತ್ತು ಒಪ್ಪಿಕೊಂಡಿಲ್ಲ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುದ್ದಿಗಳನ್ನು ಹರಿಬಿಟ್ಟಿದ್ದಾರೆ. ಜನರು ಈ ರೀತಿಯ ಸುದ್ದಿಗಳನ್ನು ನಂಬಬೇಡಿ ಎಂದು ನಟ ಪ್ರಭಾಸ್ ಆಪ್ತರೊಬ್ಬರು ತಿಳಿಸಿದ್ದಾರೆ.
ಜನವರಿ 22ರಂದು ನಡೆಯಲಿರುವ ರಾಮಲಲ್ಲಾಣ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಟರಾದ ರಜನಿಕಾಂತ್, ಚಿರಂಜೀವಿ, ರಾಮ್ ಚರಣ್, ಧನುಷ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ, ನಟ ಪ್ರಭಾಸ್ ಅವರಿಗೆ ಆಹ್ವಾನ ನೀಡಲಾಗಿದೆಯೇ ಎಂಬುದರ ಬಗ್ಗೆ ಎಲ್ಲಿಯೂ ರಿವೀಲ್ ಆಗಿಲ್ಲ. ಈ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.