46 ಬೌಂಡರಿ, 12 ಸಿಕ್ಸರ್​ ಒಳಗೊಂಡಂತೆ ಅಜೇಯ 426 ರನ್​ ಬಾರಿಸಿ ದೇಶೀಯ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ Haryana ಬ್ಯಾಟರ್

Yashvardhan Dalal
Published on

ಹರಿಯಾಣ: ಹಾಲಿ ನಡೆಯುತ್ತಿರುವ ದೇಶೀಯ ಕ್ರಿಕೆಟ್​ ಟೂರ್ನಿಗಳಾದ ರಣಜಿ ಹಾಗೂ ಕರ್ನಲ್​ ಸಿಕೆ ನಾಯ್ಡು ಟ್ರೋಫಿಯಲ್ಲಿ ಯುವ ಬ್ಯಾಟರ್​ಗಳು ರನ್​ ಹೊಳೆಯೇ ಹರಿಸುತ್ತಿದ್ದು, ಖ್ಯಾತನಾಮರ ಹೆಸರಿನಲ್ಲಿದ್ದ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿದಂತೆ ಖ್ಯಾತನಾಮರು ರನ್ ಗಳಿಸಲು ಪರದಾಡಿದ್ದರು. ಆದರೆ, ದೇಶೀಯ ಕ್ರಿಕೆಟ್​ನಲ್ಲಿ  400 ರನ್ ಬಾರಿಸುವ ಮೂಲಕ ಬ್ಯಾಟರ್​ ಒಬ್ಬರು ಇತಿಹಾಸ ಸೃಷ್ಟಿಸಿದ್ದು, ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.

ಹರಿಯಾಣ (Haryana) ಹಾಗೂ ಮುಂಬೈ (Mumbai) ನಡುವಿನ ಕರ್ನಲ್​ ಸಿಕೆ ನಾಯ್ಡು ಟ್ರೋಫಿಯಲ್ಲಿ (CK Naidu Trophy) ಯಶ್​ವರ್ಧನ್​ ದಲಾಲ್​ (Yashvardhan Dalal) ಎಂಬ ಯುವ ಬ್ಯಾಟರ್​ 451 ಎಸೆತಗಳಲ್ಲಿ 46 ಬೌಂಡರಿ, 12 ಸಿಕ್ಸರ್ ಒಳಗೊಂಡಂತೆ 400 ರನ್ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಉತ್ತರಪ್ರದೇಶದ ಬ್ಯಾಟರ್​ ಸಮೀರ್​ ರಿಜ್ವಿ ಹೆಸರಿನಲ್ಲಿತ್ತು.

ಕರ್ನಲ್​ ಸಿಕೆ ನಾಯ್ಡು ಟ್ರೋಫಿಯ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಹರಿಯಾಣ ಬೃಹತ್​ ಮೊತ್ತ ಕಲೆಹಾಕಿದ್ದು, ಆರಂಭಿಕ ಜೋಡಿ ಅರ್ಶ್ ರಂಗ ಮತ್ತು ಯಶ್​ವರ್ಧನ್ ದಲಾಲ್ ದಾಖಲೆಯ ಇನ್ನಿಂಗ್ಸ್  ಆಡಿದ್ದಾರೆ. ಈ ಜೋಡಿ ಮೊದಲ ವಿಕೆಟ್​ಗೆ 410 ರನ್​ಗಳ ಜತೆಯಾಟವಾಡಿದ್ದು, ಎರಡನೇ ದಿನದಾಟದ ಆರಂಭದಲ್ಲಿ ಅರ್ಶ್​ ರಂಗ 151 ರನ್​ಗಳಿಗೆ ಔಟ್​ ಆದರು. ಆ ಬಳಿಕ ಯಶ್​ವರ್ಧನ್​ ಮುಂಬೈ ಬೌಲರ್​ಗಳ ಬೆವರಿಳಿಸಿದರು.

ಮುಂಬೈ ಬೌಲರ್​ಗಳ ಎದುರು ದಿಟ್ಟ ಆಟ ಪ್ರದರ್ಶಿಸಿದ ದಲಾಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಅಂತಿಮವಾಗಿ ಎರಡನೇ ದಿನದಾಟದ ಅಂತ್ಯದ ವೇಳೆಗೆ 451 ಎಸೆತಗಳಲ್ಲಿ 46 ಬೌಂಡರಿ, 12 ಸಿಕ್ಸರ್ ಒಳಗೊಂಡಂತೆ 400 ರನ್ ಗಳಿಸಿದರು. ಎರಡನೇ ದಿನದಾಟದ ಅಂತ್ಯಕ್ಕೆ ಹರಿಯಾಣ 8 ವಿಕೆಟ್​ ನಷ್ಟಕ್ಕೆ 732 ರನ್​ ಗಳಿಸಿದ್ದು, ಡಿಕ್ಲೇರ್​ ಘೋಷಿಸಿಲ್ಲ. ಮೂರನೇ ದಿನದಾಟಕ್ಕೆ ಪಂದ್ಯ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net