

ಜುಲಾನಾ: ಈಚೆಗೆ ಮುಕ್ತಾಯಗೊಂಡ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ (Haryana Assembly Election) ಬಿಜೆಪಿ (BJP) ಭರ್ಜರಿ ಜಯ ಗಳಿಸಿದ್ದು, ಕಾಂಗ್ರೆಸ್ಗೆ (Congress) ಮತ್ತೊಮ್ಮೆ ಆಘಾತವನ್ನುಂಟು ಮಾಡಿದೆ. ಆರಂಭದಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಆ ನಂತರ ನಡೆದ ಟ್ರೆಂಡ್ನಲ್ಲಿ ಹಿನ್ನಡೆ ಅನುಭವಿಸಿ ತೀವ್ರ ಮುಖಭಂಗವನ್ನು ಅನುಭವಿಸಿತು. ಕಾಂಗ್ರೆಸ್ ಸೋಲಿನ ಹೊರತಾಗಿಯೂ ಅದರ ಅಭ್ಯರ್ಥಿಯೊಬ್ಬರು ಸಖತ್ ಸೌಂಡ್ ಮಾಡುತ್ತಿದ್ದು, ರಾಷ್ಟ್ರ ರಾಜಕಾರಣದಲ್ಲೇ (National Politics) ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ.
ಹರಿಯಾಣದ ಜುಲಾನಾ (Julana) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಕುಸ್ತಿಪಟು ವಿನೇಶ್ ಪೋಗಟ್ (Vinesh Phogat) ಬಿಜೆಪಿಯ ಯೋಗೇಶ್ ಬೈರಾಗಿ ವಿರುದ್ಧ ಗೆಲುವು ಸಾಧಿಸಿದ್ದು, ಕ್ರೀಡೆ ಬಳಿಕ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಮೂಲಕ ವಿನೇಶ್ ಹೊಸ ಜೀವನವನ್ನು ಆರಂಭಿಸಿದ್ದು, ಅವರು ನಡೆದ ಬಂದ ಹಾದಿಯೇ ಬಲು ರೋಚಕವಾಗಿದೆ.
ಬಿಜೆಪಿಯ ಯೋಗೇಶ್ ಬೈರಾಗಿ (Yogesh Bairagi) ವಿರುದ್ಧ 6,015 ಮತಗಳ ಅಂತರದಲ್ಲಿ ಜಯ ಸಾಧಿಸಿದ ವಿನೇಶ್ ಇದಕ್ಕೂ ಮುನ್ನ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics) ಪದಕ ವಂಚಿತರಾಗಿದ್ದರು. 100 ಗ್ರಾಂ ತೂಕ ಹೆಚ್ಚಳ ಕಾರಣದಿಂದ ಒಲಿಂಪಿಕ್ ಪದಕ ವಂಚಿತರಾದ ವಿನೇಶ್ ಇದೀಗ ರಾಜಕೀಯದಲ್ಲಿ ಅಖಾಡದಲ್ಲಿ ಗೆದ್ದು ಬೀಗಿದ್ದಾರೆ. ಚಿನ್ನದ ಪದಕದಿಂದ ಅನರ್ಹತೆಯ ಬೆನ್ನಲ್ಲೇ ಬೆಳ್ಳಿ ಮೆಡಲ್ಗಾಗಿ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಅವರ ಮನವಿಯನ್ನು ಸಿಎಎಸ್ ಕೂಡ ತಿರಸ್ಕರಿಸಿತ್ತು. ಇದರೊಂದಿಗೆ ಒಲಿಂಪಿಕ್ಸ್ ಅಖಾಡದಲ್ಲಿ ಪದಕ ಗೆಲ್ಲುವ ಅವರ ಬಹುಕಾಲದ ಕನಸು ಕೂಡ ಕಮರಿತು.
ಇದರ ಬೆನ್ನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ್ದ ವಿನೇಶ್ ಆ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆ ಬಳಿಕ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಅವರು ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ ವಿನೇಶ್ ಆ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡುವ ಮೂಲಕ ಬಿಜೆಪಿಯ ಯೋಗೇಶ್ ಬೈರಾಗಿ ವಿರುದ್ಧ 6,015 ಮತಗಳನ್ನುಅಂತರದಲ್ಲಿ ಜಯಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ರಾಜಕೀಯದ ಅಖಾಡದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.