'ಅತ್ತ ಸ್ಥಬ್ಧ, ಇತ್ತ ಬೇರ' ಎರಡು ದಿನ, ಎರಡು ಚಿತ್ರಗಳಲ್ಲಿ ಹರ್ಷಿಕಾ ಡಬಲ್ ಧಮಾಕಾ

harshika
Published on

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ‘ತಾಯ್ತ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದೀಗ ಹರ್ಷಿಕಾ ಪೂಣಚ್ಚ ನಾಯಕಿಯಾಗಿರುವ ‘ಸ್ಥಬ್ಧ’ ಚಿತ್ರದ ಟ್ರೇಲರ್ ಭಾನುವಾರ (ಮೇ 21) ಬಿಡುಗಡೆ ಮಾಡಲಾಗಿದೆ.

ರಾಘವ ಲಾಲಿ ನಿರ್ದೇಶನದ, ಪ್ರತಾಪ್ ಸಿಂಹ್ ನಾಯಕನಾಗಿರುವ ಈ ಚಿತ್ರದಲ್ಲಿ ಹರ್ಷಿಕಾ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮುಗ್ಧ, ಗ್ಲಾಮರಸ್ ಹುಡುಗಿಯಾಗಿ ಮತ್ತು ಹಾರರ್ ಸ್ಪರ್ಶವಿರುವ ಲುಕ್ ಇದೆ. ರ್ಪಾಮೆನ್ಸ್‌ಗೆ ಪ್ರಾಮುಖ್ಯತೆ ಇರುವ ಪಾತ್ರ. ಈ ಹಿಂದೆ ಶಿವಣ್ಣ ಮತ್ತು ಅಪ್ಪು ಸರ್ ಜತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಜತೆ ನಟಿಸುವ ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ’ ಎಂದು ಸಂತಸ ಹಂಚಿಕೊಂಡರು ಹರ್ಷಿಕಾ ಪೂಣಚ್ಚ. ನಾಯಕ ಪ್ರತಾಪ್ ಸಿಂಹ, ‘ಜನ ಒತ್ತಡ ಮರೆತು ಎರಡು ತಾಸು ಮನರಂಜನೆಗಾಗಿ ಥಿಯೇಟರ್‌ಗೆ ಹೋಗುತ್ತಾರೆ. ಸಸ್ಪೆನ್ಸ್, ಲವ್, ಸೆಂಟಿಮೆಂಟ್ ಎಲ್ಲವೂ ಇರುವ ಕಂಪ್ಲೀಟ್ ಎಂಟರ್‌ಟೇನರ್ ಚಿತ್ರವಿದು’ ಎಂದು ಹೇಳಿಕೊಂಡರು.

ಇದೊಂದು ಹಾರರ್ ಸಸ್ಪೆನ್ಸ್ ಚಿತ್ರವಾಗಿದ್ದು, ಎರಡು ಫೈಟ್ ಹಾಗೂ ಎರಡು ಹಾಡುಗಳಿವೆ. ಪ್ರತಾಪ್, ಹರ್ಷಿಕಾ ಜತೆ ರಾಘವೇಂದ್ರ ರಾಜಕುಮಾರ್, ಪ್ರಶಾಂತ್ ಸಿದ್ದಿ, ಪ್ರಿಯಾಂಕಾ, ಭಜರಂಗಿ ಪ್ರಸನ್ನ ಪ್ರಮುಖ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಜೂನ್ 9ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಧರ್ಮಸ್ಥಳದಲ್ಲಿ ‘ಬೇರ’ ಟ್ರೇಲರ್

ವಿನು ಬಳಂಜ ನಿರ್ದೇಶನದ, ಹರ್ಷಿಕಾ ಪೂಣಚ್ಚ ನಾಯಕಿಯಾಗಿರುವ ‘ಬೇರ’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಸೋಮವಾರ (ಮೇ 22) ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ನಿರ್ದೇಶಕ ವಿನು ಬಳಂಜ, ನಿರ್ಮಾಪಕ ದಿವಾಕರ ದಾಸ ನೇರ್ಲಾಜೆ, ನಾಯಕಿ ಹರ್ಷಿಕಾ ಪೂಣಚ್ಚ, ನಟರಾದ ಸ್ವರಾಜ್ ಶೆಟ್ಟಿ, ಯಶ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net