

| ಚೇತನ್ ನಾಡಿಗೇರ್ ಬೆಂಗಳೂರು
‘ಅವಕಾಶ ಹುಟ್ಟಿಕೊಳ್ಳಲ್ಲ ಕಣೋ. ಅದು ನಮ್ಮ ಕಣ್ಣೆದುರೇ ಇರುತ್ತೆ. ನಾವು ಹುಡುಕಬೇಕು ಅಷ್ಟೇ ...’
ಅಪ್ಪ ಈ ಮಾತು ಹೇಳುವವರೆಗೂ ಮಗನಿಗೆ ಈ ವಿಷಯ ಹೊಳೆದೇ ಇರುವುದಿಲ್ಲ. ಚಿತ್ರ ನಿರ್ದೇಶಿಸಬೇಕು ಎಂಬ ತನ್ನ ಕನಸು ನನಸು ಮಾಡಿಕೊಳ್ಳುವುದಕ್ಕೆ ಆತ ಇಡೀ ಗಾಂಧಿನಗರವನ್ನು ಒಂದು ರೌಂಡು ಸುತ್ತಿಬಂದಿರುತ್ತಾನೆ. ನೂರೆಂಟು ನಿರ್ಮಾಪಕರಿಗೆ ಕಥೆ ಹೇಳುವುದಕ್ಕೆ ಹೋಗಿ ಹೊರದಬ್ಬಿಸಿಕೊಂಡಿರುತ್ತಾನೆ. ನಿರ್ದೇಶಕನಾಗುವುದಕ್ಕೆ ಅವಕಾಶಗಳೇ ಸಿಗುತ್ತಿಲ್ಲ ಎಂದು ಕುಳಿತಿರುವಾಗ ಅಪ್ಪ ಅರ್ಥ ಮಾಡಿಸುತ್ತಾನೆ. ನಿರ್ವಪಕರು ಸಿಗದಿದ್ದರೇನಂತೆ, ಚಿತ್ರ ನಿರ್ವಿುಸುವ ಅವಕಾಶವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ ಗಿರಿ. ಅವನ ಜತೆಗೆ ಇನ್ನಿಬ್ಬರು ಗಿರಿಗಳು ಸೇರಿಕೊಳ್ಳುತ್ತಾರೆ. ಅಲ್ಲಿಗೆ ಹರಿಕಥೆ ಆಗಬಹುದಾಗಿದ್ದ ಒಂದು ಕಥೆ, ಕ್ರಮೇಣ ಗಿರಿಕಥೆಯಾಗುತ್ತದೆ. ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಮಾಡುವುದಕ್ಕೆ ಪ್ರಯಾಸ ಪಡುತ್ತಿರುವ ಸಿನಿಮಾ ಉತ್ಸಾಹಿಗಳ ಕಥೆ. ತಲೆ ತುಂಬಾ ಚಿತ್ರ ಮಾಡುವ ಹುಚ್ಚು ಹಿಡಿಸಿಕೊಂಡವರು, ಚಿತ್ರ ಮಾಡುವುದಕ್ಕೆ ಏನೆಲ್ಲಾ ಹುಚ್ಚು ಸಾಹಸಗಳನ್ನು ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ. ಅಷ್ಟೆಲ್ಲಾ ಮಾಡಿ, ಕೊನೆಗೆ ಗಿರಿ ಮತ್ತು ತಂಡಕ್ಕೆ ಚಿತ್ರ ಮಾಡುವುದಕ್ಕೆ ಸಾಧ್ಯವಾ ಎಂದು ಹಾಸ್ಯಮಯವಾಗಿ ತೋರಿಸಲಾಗಿದೆ.
ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ. ಪ್ರೇಕ್ಷಕರನ್ನು ಎರಡು ಗಂಟೆ ನಗಿಸಬೇಕು ಎಂಬುದು ಚಿತ್ರದ ಉದ್ದೇಶ. ಹಾಗಾಗಿ, ಇಲ್ಲಿ ಲಾಜಿಕ್ ಹುಡುಕಬಾರದು. ಮ್ಯಾಜಿಕ್ ಅಷ್ಟನ್ನೇ ಗಮನಿಸಬೇಕು. ಚಿತ್ರ ಎಷ್ಟು ನಗಿಸುತ್ತದೆ, ಎಷ್ಟು ಹೊತ್ತು ನೋಡಿಸಿಕೊಂಡು ಹೋಗುತ್ತದೆ ಎನ್ನುವುದೇ ಇಲ್ಲಿ ಮುಖ್ಯ. ಹಾಗೆ ನೋಡಿದರೆ, ತೀರಾ ಎಳೆದಾಟವೇನಿಲ್ಲ. ಅನವಶ್ಯಕವಾಗಿ ಎಳೆದಾಡದಂತೆ ಚಿತ್ರಕಥೆ ರೂಪಿಸಲಾಗಿದೆ. ಒಂದಿಷ್ಟು ನಗು, ಒಂದಿಷ್ಟು ಥ್ರಿಲ್ ಜತೆಗೆ ಕೊನೆಯಲ್ಲಿ ಒಂದಿಷ್ಟು ಎಮೋಷನಲ್ ಆಗಿ ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಈ ನಿಟ್ಟಿನಲ್ಲಿ ಚಿತ್ರಕಥೆಯ ಜತೆಗೆ ಕಲಾವಿದರ ಕೊಡುಗೆ ದೊಡ್ಡದಿದೆ. ಇಂಥ ಚಿತ್ರಗಳು ರಿಷಬ್ಗೆ ಸಲೀಸು. ಇಲ್ಲಿ ಭರ್ಜರಿ ಹೊಡೆದಾಟವಿಲ್ಲ, ಕನಸಿನ ಹಾಡುಗಳಿಲ್ಲ. ತಮ್ಮ ವ್ಯಕ್ತಿತ್ವ ಮತ್ತು ಇಮೇಜ್ಗೆ ತಕ್ಕ ಹಾಗೆ ಅವರಿಗೆ ಪಾತ್ರವಿದೆ ಮತ್ತು ರಿಷಬ್ ಬಹಳ ಸಲೀಸಾಗಿ ಪಾತ್ರ ತೂಗಿಸಿಕೊಂಡು ಹೋಗಿದ್ದಾರೆ. ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮಿಕ್ಕಂತೆ ಸಾಕಷ್ಟು ಕಲಾವಿದರಿದ್ದಾರೆ. ಅವರೆಲ್ಲರ ಬಗ್ಗೆ ವಿಶೇಷವಾಗಿ ಹೇಳುವಂತದ್ದೇನೂ ಇಲ್ಲ.