

ಜೈಪುರ: ಪುನೀತ್ ಅಭಿನಯದ 'ಬಿಂದಾಸ್' ಸೇರಿದಂತೆ ನಾಲ್ಕು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಹನ್ಸಿಕಾ ಮೊಟ್ವಾನಿ ಮದುವೆ ಉದ್ಯಮಿ ಸೊಹೈಲ್ ಖಟುರಿಯಾ ಜತೆ ರಾಜಸ್ತಾನದಲ್ಲಿ ಭಾನುವಾರ ರಾತ್ರಿ ನೆರವೇರಿದೆ.
ಜೈಪುರದಲ್ಲಿರುವ ಮುಂಡೋಟಾ ಅರಮನೆಯಲ್ಲಿ ಎರಡು ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಾರ ಬದಲಿಸಿಕೊಳ್ಳುವ ಮೂಲಕ ಸತಿ-ಪತಿಗಳಾಗಿದ್ದಾರೆ. ಅದಕ್ಕೂ ಮುನ್ನ ಅಲ್ಲೇ ಸಂಗೀತ ಮತ್ತು ಮೆಹೆಂದಿ ಶಾಸ್ತ್ರಗಳು ನಡೆದಿದ್ದವು.
ಇದಕ್ಕೂ ಮುನ್ನ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಠೂರಿಯಾ ಎಂಬ ತಮ್ಮ ಬಿಜಿನೆಸ್ ಪಾರ್ಟ್ನರ್ ಜತೆಗೆ ಮದುವೆಯಾಗುತ್ತಿರುವ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಹೀಗಿರುವಾಗಲೇ, ಪ್ಯಾರಿಸ್ನ ಐಫೆಲ್ ಟವರ್ನ ಮುಂಬಾಗದಲ್ಲಿ. ಕ್ಯಾಂಡಲ್ ಮತ್ತು ಗುಲಾಬಿಗಳನ್ನು ಹೃದಯದ ಆಕಾರದಲ್ಲಿ ಅಲಂಕರಿಸಿ, ಅದರ ನಡುವೆ ನಿಂತ ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಹನ್ಸಿಕಾ ಮತ್ತು ಸೋಹೈಲ್ ಪರಸ್ಪರ ಉಂಗುರಗಳನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮೂಲಗಳ ಪ್ರಕಾರ, ಹನ್ಸಿಕಾ ಅವರ ಬೆಸ್ಟ್ಫ್ರೆಂಡ್ ರಿಂಕಿಯ ಮಾಜಿಯ ಪತಿಯೇ ಈ ಸೋಹೈಲ್. 2016ರಲ್ಲಿ ಗೋವಾದಲ್ಲಿ ಮದುವೆಯಾಗಿದ್ದ ರಿಂಕಿ ಮತ್ತು ಸೋಹೈಲ್ ಒಂದು ಹಂತದಲ್ಲಿ ದೂರವಾಗಿದ್ದಾರೆ. ರಿಂಕಿಯಿಂದ ದೂರವಾದ ಸೋಹೈಲ್, ಈಗ ಹನ್ಸಿಕಾ ಅವರನ್ನು ಎರಡನೆಯ ಮದುವೆಯಾಗಿದ್ದಾರೆ.