

ಬೆಂಗಳೂರು: ಈ ವರ್ಷ ಮುಗಿಯುವುದಕ್ಕೆ ಇನ್ನು 25 ದಿನಗಳು ಮಾತ್ರ ಬಾಕಿ ಇವೆ. ಉಳಿದಿರುವ ದಿನಗಳಲ್ಲಿ ಒಂದಷ್ಟು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈಗಿರುವ ಪ್ರಶ್ನೆಯೆಂದರೆ, ಕನ್ನಡ ಚಿತ್ರರಂಗ 2022ರಲ್ಲಿ 200ರ ಕ್ಲಬ್ ಸೇರುತ್ತದಾ ಎಂದು?
ಕನ್ನಡ ಚಿತ್ರರಂಗದಲ್ಲಿ ವರ್ಷವೊಂದಕ್ಕೆ 200 ಪ್ಲಸ್ ಚಿತ್ರಗಳು ಬಿಡುಗಡೆಯಾಗುವುದು ಹೊಸದೇನಲ್ಲ. ಆದರೆ, ಕಳೆದ ಎರಡು ವರ್ಷಗಳ ಕಾಲ ಕೋವಿಡ್ನಿಂದ ಅದು ಸಾಧ್ಯವಾಗಿರಲಿಲ್ಲ. 2020ರಲ್ಲಿ ಮೊದಲ ಲಾಕ್ಡೌನ್ ಇದ್ದ ಕಾರಣ, ಆ ವರ್ಷ ಒಟ್ಟಾರೆ 100 ಚಿತ್ರಗಳು ಸಹ ಬಿಡುಗಡೆಯಾಗಿರಲಿಲ್ಲ. ಇನ್ನು, ಕಳೆದ ವರ್ಷ 100ರ ಗಡಿ ಕಷ್ಟಪಟ್ಟು ದಾಟಿತ್ತು. ಎರಡು ವರ್ಷಗಳಲ್ಲಿ ಮುಂದೂಡಲ್ಪಟ್ಟ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಈ ವರ್ಷ ಬಿಡುಗಡೆಯಾದವು. ಹಾಗಾಗಿ, ಈ ವರ್ಷ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ 200 ಮೀರಬಹುದು ಎಂದು ಅಂದಾಜಿಸಲಾಗಿತ್ತು.
ಅದಕ್ಕೆ ಸರಿಯಾಗಿ, ಡಿಸೆಂಬರ್ ಮೊದಲ ವಾರದವರೆಗೂ ಕನ್ನಡ ಚಿತ್ರರಂಗದಲ್ಲಿ 180 ಚಿತ್ರಗಳು ಬಿಡುಗಡೆಯಾಗಿವೆ. ಇನ್ನು, ಉಳಿದಿರುವ ನಾಲ್ಕು ವಾರಗಳಲ್ಲಿ 20 ಚಿತ್ರಗಳು ಬಿಡುಗಡೆಯಾಗಬೇಕಿವೆ. ಈ ಶುಕ್ರವಾರ (ಡಿ.9) 'ವಿಜಯಾನಂದ' ಸೇರಿದಂತೆ 11 ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ಸುದ್ದಿ ಇದೆ. ಇದರಲ್ಲಿ ಒಂದೆರೆಡು ಚಿತ್ರಗಳು ಹಿಂದಕ್ಕೆ ಸರಿಯುವ ಸಾಧ್ಯತೆಯೂ ಇದೆ. ಡಿ. 16ರಂದು 'ಶಂಭೋ ಶಿವ ಶಂಕರ', 'ಟೆಂಪರ್' ಮತ್ತು 'ಮೊದಲ ಮಿಡಿತ' ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ಸುದ್ದಿ ಇದೆ. ಡಿ. 23ಕ್ಕೆ ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ 'ವೇದ' ಬಿಡುಗಡೆಯಾದರೆ, ಡಿ. 30ಕ್ಕೆ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಮತ್ತು 'ಪದವಿಪೂರ್ವ' ಚಿತ್ರಗಳು ಬಿಡುಗಡೆಯಾಗಲಿವೆ.
ಇವೆಲ್ಲವನ್ನೂ ಕೂಡಿಸಿದರೆ 195 ಪ್ಲಸ್ ಚಿತ್ರಗಳಾಗುತ್ತವೆ. ಕೊನೆಯ ಕ್ಷಣದಲ್ಲಿ ಒಂದಷ್ಟು ಚಿತ್ರಗಳು ಹೊಸದಾಗಿ ಸೇರ್ಪಡೆಯಾದರೆ, ಆಗ ಮಾತ್ರ ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿದಂತಾಗುತ್ತದೆ. ಇಲ್ಲವಾದರೆ, ಬಿಡುಗಡೆಯಾಗುವುದಕ್ಕೆ ನೂರಾರು ಚಿತ್ರಗಳಿದ್ದರೂ, ಈ ವರ್ಷವೂ 200ರ ಕ್ಲಬ್ ಮಿಸ್ ಆಗುತ್ತದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳ ಬಿಡುಗಡೆ ಘೋಷಣೆಯಾಗಿ, ಈ ವರ್ಷ ಕನ್ನಡ ಚಿತ್ರರಂಗ 200ರ ಕ್ಲಬ್ ಸೇರುತ್ತದಾ ಎಂಬ ಕುತೂಹಲ ಕನ್ನಡ ಚಿತ್ರರಂಗದಲ್ಲಿದೆ.