More

    ವಿಜಯಾನಂದ ಎಂಬ ಸುಂದರ ಪ್ರಯಾಣ: ಲಿವಿಂಗ್ ಲೆಜೆಂಡ್ ಪಾತ್ರ ಮಾಡಿದ ಖುಷಿಯಲ್ಲಿ ಭರತ್

    ಬೆಂಗಳೂರು: ‘ಇದೊಂದು ಸುಂದರ ಪ್ರಯಾಣ …’

    -ಹಾಗಂತ ವರ್ಣಿಸುತ್ತಾರೆ ಭರತ್ ಬೋಪಣ್ಣ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿದ ‘ವಿಜಯಾನಂದ’ ಚಿತ್ರದಲ್ಲಿ ಅವರು ಡಾ. ಆನಂದ ಸಂಕೇಶ್ವರ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಿಮ್ಮ ಪಾತ್ರ ಹಾಗೂ ಅನುಭವ ಹೇಗಿತ್ತು ಎಂದರೆ, ಸುಂದರ ಪ್ರಯಾಣ ಎಂಬ ಮಾತುಗಳು ಅವರಿಂದ ಬರುತ್ತದೆ.

    ಕಿರುತೆರೆ ಧಾರಾವಾಹಿಗಳಿಂದ ಸಾಕಷ್ಟು ಜನಪ್ರಿಯವಾಗಿರುವ ಭರತ್​ಗೆ ಇದು ಎರಡನೆಯ ಚಿತ್ರ. ಈ ಹಿಂದೆ ‘ಡೆಮೋ ಪೀಸ್’ ಎಂಬ ಚಿತ್ರದಲ್ಲಿ ನಟಿಸಿದ್ದ ಅವರಿಗೆ, ಈ ಬಾರಿ ನೈಜ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ‘ನಾನು ಆಡಿಷನ್​ನಲ್ಲಿ ಪಾಸ್ ಆಗಿ ಈ ಚಿತ್ರತಂಡ ಸೇರ್ಪಡೆಯಾದವನು. ಸ್ಕ್ರಿಪ್ಟ್ ಓದಿದ ನಂತರ ಆನಂದ ಸಂಕೇಶ್ವರ ಅವರನ್ನು ನೋಡುವಾಸೆ ಇತ್ತು. ಏಕೆಂದರೆ, ಅವರೊಬ್ಬ ಲಿವಿಂಗ್ ಲೆಜೆಂಡ್. ಅಂತಹವರ ಪಾತ್ರ ಮಾಡುವಾಗ ಎಲ್ಲೂ ತಪ್ಪಾಗಬಾರದು. ಹಾಗಾಗಿ, ಅವರನ್ನು ಹತ್ತಿರದಿಂದ ನೋಡಿ ಅರಿತುಕೊಳ್ಳಬೇಕಿತ್ತು. ಆದರೆ, ಅವರು ಸಾಕಷ್ಟು ಬಿಜಿ ಇದ್ದರು. ಕೊನೆಗೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರಿಂದಲೇ ಅವರ ಹಲವು ಅನುಭವಗಳನ್ನು ಕೇಳಿ ತಿಳಿದುಕೊಂಡೆ. ಕಾರ್ಯಾಗಾರದಲ್ಲಿ ಭಾಗವಹಿಸಿ ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡೆ. ಲುಕ್ ಟೆಸ್ಟ್​ನಲ್ಲಿ ಗೆದ್ದೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್​ಗಳಿವೆ. 17, 25 ಮತ್ತು 30 ವರ್ಷದವನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಭರತ್.

    ನಿರ್ದೇಶಕಿ ರಿಷಿಕಾ ಶರ್ಮ ಬಹಳ ಚೆನ್ನಾಗಿ ತನ್ನಿಂದ ಔಟ್​ಪುಟ್ ತೆಗೆದಿದ್ದಾರೆ ಎನ್ನುವ ಅವರು, ‘ಚಿತ್ರದಲ್ಲಿ ಅನಂತ್ ನಾಗ್​ರಂತಹ ಹಿರಿಯ ಕಲಾವಿದರಿದ್ದರು. ಅವರ ಜತೆಗೆ ತೆರೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗದಿದ್ದರೂ, ಅವರು ಹೇಗೆ ಕೆಲಸ ಮಾಡಿದ್ದು ನೋಡಿ ಸಾಕಷ್ಟು ಇನ್​ಸ್ಪೈರ್ ಆಗಿದ್ದೇನೆ. ಒಟ್ಟಾರೆ ಇದೊಂದು ಅದ್ಭುತವಾದ ಜರ್ನಿ. ಚಿತ್ರ ಇದೇ ಡಿ.9ಕ್ಕೆ ಬಿಡುಗಡೆಯಾಗಲಿದ್ದು, ಬಹಳ ಕುತೂಹಲದಿಂದ ಕಾಯುತ್ತಿದ್ದೇನೆ’ ಎನ್ನುತಾರೆ ಭರತ್.

    ಡಾ.ಬ್ರೋಗೆ ಹತ್ತು ಲಕ್ಷ ಸಬ್​ಸ್ಕ್ರೈಬರ್ಸ್; ‘ದೇವರ’ ಬಗ್ಗೆ ಏನಂದ್ರು ಗಗನ್ ಶ್ರೀನಿವಾಸ್?; ಇಲ್ಲಿದೆ ಫಸ್ಟ್ ರಿಯಾಕ್ಷನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts