More

    ತಂದೆಯ ಫುಟ್​ಬಾಲ್​ ಕನಸು ಸಾಕಾರಗೊಳಿಸಿದ ಪುತ್ರ ಸುನೀಲ್​ ಛೇಟ್ರಿ; ಜೂನ್​ 6ಕ್ಕೆ ಕೋಲ್ಕತದಲ್ಲಿ ಕೊನೇ ಪಂದ್ಯ

    ನವದೆಹಲಿ: ಭಾರತೀಯ ಫುಟ್​ಬಾಲ್​ ಕಂಡ ಅತ್ಯಂತ ಶ್ರೇಷ್ಠ ಆಟಗಾರರೆನಿಸಿದ ಸುನೀಲ್​ ಛೇಟ್ರಿ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಜೂನ್​ 6ರಂದು ಕೋಲ್ಕತದ ಸಾಲ್ಟ್​ ಲೇಕ್​ ಸ್ಟೇಡಿಯಂನಲ್ಲಿ ಕುವೈತ್​ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್​ ಟೂರ್ನಿಯ ಕಾದಾಟವು 39 ವರ್ಷದ ಫಾರ್ವರ್ಡ್​ ಆಟಗಾರ ಸುನೀಲ್​ ಛೇಟ್ರಿ ಪಾಲಿಗೆ ಭಾರತ ಪರ ಕೊನೆಯ ಪಂದ್ಯ ಆಗಿರಲಿದೆ. ಈ ಮೂಲಕ 19 ವರ್ಷಗಳ ಸುದೀರ್ಘ ವೃತ್ತೀಜಿವನಕ್ಕೆ ತೆರೆ ಎಳೆಯಲಿದ್ದಾರೆ.

    ಭಾರತ ಫುಟ್​ಬಾಲ್​ ತಂಡದ ಹಾಲಿ ನಾಯಕರೂ ಆಗಿರುವ ಸುನೀಲ್​ ಛೇಟ್ರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡುವ ಮೂಲಕ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2005ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಛೇಟ್ರಿ ಇದುವರೆಗೆ ಆಡಿರುವ 150 ಪಂದ್ಯಗಳಲ್ಲಿ 94 ಗೋಲು ಸಿಡಿಸಿದ್ದಾರೆ. ಈ ಮೂಲಕ ಭಾರತ ಪರ ಸರ್ವಾಧಿಕ ಪಂದ್ಯ ಆಡಿದ ಮತ್ತು ಗೋಲು ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.

    ನಾನು ಎಂದಿಗೂ ಮರೆಯದ ಮತ್ತು ಸದಾ ನೆನಪಿಸಿಕೊಳ್ಳುವ ದಿನವೆಂದರೆ ಅದು ನಾನು ಮೊದಲ ಬಾರಿಗೆ ದೇಶದ ಪರ ಆಡಿದ ದಿನ. ಅದು ನಂಬಲಸಾಧ್ಯವಾಗಿತ್ತು. ಆದರೆ ಒಂದು ದಿನ ಮುನ್ನ ಬೆಳಗ್ಗೆ ನನ್ನ ಮೊದಲ ರಾಷ್ಟ್ರೀಯ ಕೋಚ್​ ಸುಖ್ವಿಂದರ್​ ಸಿಂಗ್​ ಸರ್​ ಬಂದು, ನೀನು ನಾಳೆ ಆಡಲಿರುವೆ ಎಂದಾಗ ಆದ ಅನುಭವ ಹೇಳಿಕೊಳ್ಳಲು ಸಾಧ್ಯವಾಗದು. ಅನಂತರದ ಪ್ರತಿ ಕ್ಷಣವೂ ನನಗೆ ನೆನಪಿದೆ. ಜೆರ್ಸಿ ತೆಗೆದುಕೊಂಡು ಅದಕ್ಕೆ ಪ್ಯೂರ್ಮ್​ ಸಿಂಪಡಿಸಿದ್ದೆ. ಬೆಳಗ್ಗಿನ ತಿಂಡಿಯಿಂದ ಮಧ್ಯಾಹ್ನದ ಊಟ, ನನ್ನ ಮೊದಲ ಗೋಲು, 80ನೇ ನಿಮಿಷದಲ್ಲಿ ನಾವು ಗೋಲು ಬಿಟ್ಟುಕೊಟ್ಟಿದ್ದು ಎಲ್ಲವೂ ನೆನಪಿದೆ. ಅದು ನನ್ನ ರಾಷ್ಟ್ರೀಯ ತಂಡದಲ್ಲಿನ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ’ ಎಂದು ಛೇಟ್ರಿ ವಿವರಿಸಿದ್ದಾರೆ.

    ತಂದೆಯ ಕನಸು ಸಾಕಾರಗೊಳಿಸಿದ ಮಗ
    ವೃತ್ತಿಪರ ಫುಟ್​ಬಾಲ್​ ಆಟಗಾರನಾಗುವುದು ಸುನೀಲ್​ ಛೇಟ್ರಿ ಅವರ ತಂದೆ ಖರ್ಗಾ ಛೇಟ್ರಿ ಕನಸಾಗಿತ್ತು. ಭಾರತೀಯ ಸೇನೆ ಸೇರಿ ಆರ್ಮಿ ಫುಟ್​ಬಾಲ್​ ತಂಡದ ಪರ ಆಡಿದ್ದ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಅವರು ಪುತ್ರನ ಮೂಲಕ ಅದನ್ನು ನನಸಾಗಿಸಲು ಪ್ರಯತ್ನಿಸಿದರು. 1984ರ ಆಗಸ್ಟ್​ 3ರಂದು ಆಂಧ್ರದ ಸಿಕಂದರಾಬಾದ್​ನಲ್ಲಿ ಜನಿಸಿದ ಸುನೀಲ್​ ಛೇಟ್ರಿ, ಬಾಲ್ಯದ ಹೆಚ್ಚಿನ ಸಮಯವನ್ನು ಡಾರ್ಜಿಲಿಂಗ್​ನಲ್ಲಿ ಕಳೆದಿದ್ದರು. ಅವರ ತಾಯಿ ಸುಶೀಲಾ ಮಾತ್ರವಲ್ಲದೆ ಇಬ್ಬರು ಅವಳಿ ಸಹೋದರಿಯರು ಕೂಡ ನೇಪಾಳ ಮಹಿಳಾ ಫುಟ್​ಬಾಲ್​ ತಂಡದ ಪರ ಆಡಿದ್ದಾರೆ. ಬಾಲ್ಯದಿಂದಲೂ ಫುಟ್​ಬಾಲ್​ ಆಡುತ್ತಿದ್ದ ಛೇಟ್ರಿ 2001&02ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಸಿಟಿ ಕ್ಲಬ್​ ಮೂಲಕ ಅದನ್ನು ವೃತ್ತಿಪರವಾಗಿ ಆಡಲಾರಂಭಿಸಿದರು. 2002ರಲ್ಲಿ ಮೋಹನ್​ ಬಗಾನ್​ ಸೇರಿದ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ.

    ಫುಟ್​ಬಾಲ್​ ಆಡುವ ಜತೆಗೆ ಸೇನಾಧಿಕಾರಿಯಾಗಿದ್ದ ತಂದೆಯ ಜತೆಗೂ ದೇಶದ ಹೆಚ್ಚಿನ ಭಾಗ ಸುತ್ತಿರುವ ಛೇಟ್ರಿ, ಇಂಗ್ಲಿಷ್​, ಹಿಂದಿ ಜತೆಗೆ ನೇಪಾಳಿ, ಬೆಂಗಾಲಿ, ಕನ್ನಡ ಮಾತನಾಡಬಲ್ಲರು ಮತ್ತು ತೆಲುಗು, ಮರಾಠಿ, ಕೊಂಕಣಿ ಭಾಷೆಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಮೋಹನ್​ ಬಗಾನ್​ ತಂಡದಲ್ಲಿ ತನ್ನ ಕೋಚ್​ ಆಗಿದ್ದ ಸುಬ್ರತಾ ಭಟ್ಟಾಚಾರ್ಯ ಅವರ ಪುತ್ರಿ ಸೋನಂ ಭಟ್ಟಾಚಾರ್ಯರನ್ನು ವಿವಾಹವಾಗಿರುವ ಛೇಟ್ರಿ, ಓರ್ವ ಪುತ್ರನನ್ನು ಹೊಂದಿದ್ದಾರೆ.

    2002ರಲ್ಲಿ ಮೋಹನ್​ ಬಗಾಲ್​ ಪರ ಆಡುವ ಮೂಲಕ ಕ್ಲಬ್​ ಫುಟ್​ಬಾಲ್​ ಆರಂಭಿಸಿದ ಛೇಟ್ರಿ, ನಂತರ ಜೆಸಿಟಿ, ಈಸ್ಟ್​ ಬೆಂಗಾಲ್​, ಡೆಂಪೋ, ಕನ್ಸಾಸ್​ ಸಿಟಿ ವಿಜಾರ್ಡ್​, ಚಿರಾಗ್​ ಯುನೈಟೆಡ್​, ಸ್ಪೋರ್ಟಿಂಗ್​ ಸಿಪಿ, ಚರ್ಚಿಲ್​ ಬ್ರದರ್ಸ್​ ಪರ ಆಡಿದ್ದು, 2013ರಿಂದ ಬೆಂಗಳೂರು ಎಫ್​ಸಿ ತಂಡದ ನಾಯಕರಾಗಿದ್ದಾರೆ. ಐಎಸ್​ಎಲ್​ನಲ್ಲಿ ಬೆಂಗಳೂರು ಎಫ್​ಸಿ ಪರ ಅವರು ಇನ್ನೂ ಕೆಲ ವರ್ಷ ಆಡುವ ನಿರೀಕ್ಷೆ ಇದೆ.

    ದಿಗ್ಗಜ ಬೈಚುಂಗ್​ ಭುಟಿಯಾ 2011ರಲ್ಲಿ ನಿವೃತ್ತಿ ಹೊಂದಿದ ಬಳಿಕ ಭಾರತೀಯ ಫುಟ್​ಬಾಲ್​ಗೆ ಛೇಟ್ರಿ ಶಕ್ತಿಯಾಗಿ ನಿಂತಿದ್ದರು. ಆಡಿದ ಬಹುತೇಕ ಪಂದ್ಯಗಳಲ್ಲಿ ಗೋಲು ಸಿಡಿಸಿ ಮಿಂಚಿದ್ದಾರೆ. ಆದರೆ ಇದೀಗ ಛೇಟ್ರಿ ನಿರ್ಗಮಿಸುತ್ತಿರುವ ಸಮಯದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ಮತ್ತೋರ್ವ ಪ್ರಮುಖ ಸ್ಟ್ರೆ$ಕರ್​ ಕಾಣಿಸುತ್ತಿಲ್ಲ. ಹೀಗಾಗಿ ದೊಡ್ಡ ಖಾಲಿ ಜಾಗವೊಂದನ್ನು ಛೇಟ್ರಿ ಬಿಟ್ಟುಹೋಗುತ್ತಿದ್ದಾರೆ.

    ಫಿಫಾದಿಂದ ಸಲಾಂ
    “ಲೆಜೆಂಡ್​ ಆಗಿ ನಿವೃತ್ತಿ ಹೊಂದುತ್ತಿದ್ದಾರೆ’ ಎಂದು ಬರೆದು ಫುಟ್​ಬಾಲ್​ ಸ್ಟಾರ್​ಗಳಾದ ಪೋರ್ಚುಗಲ್​ನ ಕ್ರಿಶ್ಚಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೋನೆಲ್​ ಮೆಸ್ಸಿ ಜತೆಗೆ ಸುನೀಲ್​ ಛೇಟ್ರಿ ಪೋಡಿಯಂ ಮೇಲೆ ನಿಂತಿರುವ ಚಿತ್ರವನ್ನು ಪ್ರಕಟಿಸಿ ಫಿಫಾ ಗೌರವ ಸಲ್ಲಿಸಿದೆ. ಹಾಲಿ ಆಟಗಾರರ ಪೈಕಿ ಛೇಟ್ರಿ, ರೊನಾಲ್ಡೊ (128) ಮತ್ತು ಮೆಸ್ಸಿ (106) ಬಳಿಕ 3ನೇ ಗರಿಷ್ಠ ಗೋಲು ಸ್ಕೋರರ್​ ಆಗಿದ್ದಾರೆ. ಸಾರ್ವಕಾಲಿಕ ಪಟ್ಟಿಯಲ್ಲಿ ಛೇಟ್ರಿ 4ನೇ ಸ್ಥಾನದಲ್ಲಿದ್ದಾರೆ.

    ಛೇಟ್ರಿ ಪ್ರಮುಖ ಸಾಧನೆಗಳು:
    *3 ಬಾರಿ (2007, 2009, 2012) ಭಾರತದ ನೆಹರು ಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ.
    *3 ಬಾರಿ ಸ್ಯಾಫ್​ ಚಾಂಪಿಯನ್​ಷಿಪ್​ (2011, 2015, 2021) ಪ್ರಶಸ್ತಿ ಗೆಲುವು.
    *2008ರ ಎಎಫ್​ಸಿ ಚಾಲೆಂಜ್​ ಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ.
    *2011ರಲ್ಲಿ ಭಾರತ 27 ವರ್ಷಗಳ ಬಳಿಕ ಎಎಫ್​ಸಿ ಏಷ್ಯನ್​ ಕಪ್​ಗೆ ಅರ್ಹತೆ ಗಳಿಸಲು ನೆರವು.
    *7 ಬಾರಿ ಎಐಎಫ್​​ಎಫ್​​ ವರ್ಷದ ಆಟಗಾರ ಗೌರವ.
    *2 ಬಾರಿ ಕಾಂಟಿನೆಂಟಲ್​ ಕಪ್​ (2018, 2023) ಪ್ರಶಸ್ತಿ ಗೆಲುವು.
    *2023ರ ತ್ರಿಕೋನ ಸರಣಿ ಪ್ರಶಸ್ತಿ ಜಯ.
    *ಭಾರತ ಪರ ಗರಿಷ್ಠ 4 ಬಾರಿ ಹ್ಯಾಟ್ರಿಕ್​ ಗೋಲು.
    *ಖೇಲ್​ರತ್ನ ಪ್ರಶಸ್ತಿಗೆ ಭಾಜನರಾದ ಮೊದಲ ಫುಟ್​ಬಾಲ್​ ಆಟಗಾರ.

    *ಭಾರತೀಯ ಫುಟ್​ಬಾಲ್​ಅನ್ನು ಜಾಗತಿಕ ಮಟ್ಟಕ್ಕೇರಿಸಿದ ನಿಜವಾದ ದಿಗ್ಗಜ. ಫುಟ್​ಬಾಲ್​ ಆಟದಲ್ಲಿ ತೊಡಗಿಸಿಕೊಳ್ಳಲು ಒಂದು ತಲೆಮಾರಿಗೆ ಸ್ಫೂರ್ತಿ ತುಂಬಿದ್ದೀರಿ. ಭಾರತೀಯ ಕ್ರೀಡೆಯಲ್ಲಿ ನಿಮ್ಮ ಆಟವನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ. ಥ್ಯಾಂಕ್ಯೂ ಲೆಜೆಂಡ್​.
    | ಯುವರಾಜ್​ ಸಿಂಗ್​, ಮಾಜಿ ಕ್ರಿಕೆಟಿಗ

    *ಸುನೀಲ್​ ಯಾವುದೇ ಅನುಮಾನವಿಲ್ಲ, ನೀವು ಭಾರತೀಯ ಫುಟ್​ಬಾಲ್​ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಭಾರತೀಯ ಫುಟ್​ಬಾಲ್​ಗೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಿವೃತ್ತಿ ಭಾರತೀಯ ಫುಟ್​ಬಾಲ್​ಗೆ ದೊಡ್ಡ ನಷ್ಟ.
    | ಬೈಚುಂಗ್​ ಭುಟಿಯಾ, ಮಾಜಿ ಫುಟ್​ಬಾಲ್​ ಆಟಗಾರ

    ಟಿ20 ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ಗೇರಿದರೆ ಗಯಾನಾದಲ್ಲಿ ಜೂನ್​ 27ರಂದು ಪಂದ್ಯ; ಹೀಗಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts