

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್ ಕಲಾವಿದರ ಸಂಘ ಎಲ್ಲರೂ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಕುರಿತು ಮಾತನಾಡಿದ ಸುರೇಶ್, ಈ ಅನ್ಯಾಯವನ್ನು ಎಲ್ಲರೂ ಖಂಡಿಸಬೇಕಿದೆ. ದರ್ಶನ್ ಚಿತ್ರರಂಗದ ಮೇರುನಟರಾಗಿದ್ದು, ನಾವೆಲ್ಲರೂ ಮೊದಲು ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಬೇಕಿದೆ. ಕಾನೂನು ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳ ಜೊತೆ ಸಭೆ ನಡೆಸಬೇಕು. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ಇದ್ದಾಗ ನಾವು ಎಂಟ್ರಿ ಆಗಲು ಆಗುವುದಿಲ್ಲ. 2011ರಲ್ಲಿ ಗಲಾಟೆಯಾಗಿದ್ದಾಗ ನಾವು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರನ್ನು ಮಾತನಾಡಿಸಿ ಇಬ್ಬರ ನಡುವಿನ ಸಂಬಂಧವನ್ನು ಸರಿ ಮಾಡಿದ್ವಿ. ಅದು ಕುಟುಂಬದ ವಿಚಾರವಾಗಿತ್ತು. ಈಗ ನಾವು ಎಂಟ್ರಿಯಾಗಲು ಸಾಧ್ಯವಿಲ್ಲ. ಕಾನೂನಿನ ತೀರ್ಪು ಬಂದಾಗ ಕೂಡಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಂದು ತಿಳಿಸಿದ್ದಾರೆ.
ದರ್ಶನ್ ಅವರ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಐದಾರು ತಿಂಗಳು ದರ್ಶನ್ ಪ್ರಕರಣದಿಂದ ಹೊರ ಬರಲು ಸಾಧ್ಯವಿಲ್ಲ. ಮುಂದೆ ಸಿನಿಮಾಗಳೂ ಘೋಷಣೆ ಆಗಿದೆ. ಕೆಲವರು ಅಡ್ವಾನ್ಸ್ ಕೊಟ್ಟಿದ್ದಾರೆ. ಹೀಗಾಗಿ ಬ್ಯಾನ್ ಅಷ್ಟು ಸುಲಭವಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ತಿಳಿಸಿದ್ದಾರೆ.