ಟಿ20 ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ಗೇರಿದರೆ ಗಯಾನಾದಲ್ಲಿ ಜೂನ್​ 27ರಂದು ಪಂದ್ಯ; ಹೀಗಿದೆ ಕಾರಣ...

web ind t20
Published on

ನವದೆಹಲಿ: ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಸೆಮಿಫೈನಲ್​ ಹಂತಕ್ಕೇರಿದರೆ, ಜೂನ್​ 27ರಂದು ಗಯಾನಾದಲ್ಲಿ ಆಡಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ವೀಸಲು ಅನುಕೂಲಕರವಾದ ಸಮಯದಲ್ಲಿ ಪಂದ್ಯ ಆಯೋಜಿಸುವ ಸಲುವಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಟಿ20 ವಿಶ್ವಕಪ್​ನಲ್ಲಿ ಜೂನ್​ 26ರಂದು ಟ್ರಿನಿಡಾಡ್​ನಲ್ಲಿ ಮೊದಲ ಸೆಮಿಫೈನಲ್​ ನಡೆಯಲಿದೆ. ಆದರೆ ಈ ಪಂದ್ಯ ಸ್ಥಳಿಯ ಕಾಲಮಾನ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದ್ದು, ಭಾರತದಲ್ಲಿ ಜೂನ್​ 27ರ ಬೆಳಗ್ಗೆ 6 ಗಂಟೆಗೆ ಶುರುವಾಗಲಿದೆ. ಜೂನ್​ 27ಕ್ಕೆ ಗಯಾನಾದಲ್ಲಿ ನಿಗದಿಯಾಗಿರುವ 2ನೇ ಸೆಮಿಫೈನಲ್​ ಸ್ಥಳಿಯ ಕಾಲಮಾನ ಬೆಳಗ್ಗೆ 10.30ಕ್ಕೆ ಶುರುವಾಗಲಿದೆ. ಈ ಪಂದ್ಯ ಭಾರತದಲ್ಲಿ ರಾತ್ರಿ 8ರಿಂದ ನೇರಪ್ರಸಾರ ಕಾಣಲಿದ್ದು, ಇದು ಭಾರತೀಯ ಕ್ರಿಕೆಟ್​ ಪ್ರೇಮಿಗಳ ವೀಕ್ಷಣೆಗೆ ಅನುಕೂಲಕರ ಸಮಯವೆನಿಸಿದೆ.

ಜೂನ್​ 29ರಂದು ಬ್ರಿಜ್​ಟೌನ್​ನಲ್ಲಿ (ಬಾರ್ಬಡೋಸ್​) ನಿಗದಿಯಾಗಿರುವ ಫೈನಲ್​ ಪಂದ್ಯವೂ ಹಗಲಿನಲ್ಲಿ ನಡೆಯಲಿದ್ದು, ಸ್ಥಳಿಯ ಕಾಲಮಾನ ಬೆಳಗ್ಗೆ 10 ಅಂದರೆ ಭಾರತದಲ್ಲಿ ರಾತ್ರಿ 7.30ರಿಂದ ನೇರಪ್ರಸಾರ ಕಾಣಲಿದೆ.

ಇದರೊಂದಿಗೆ ಪ್ಲೇಯಿಂಗ್​ ಕಂಡೀಷನ್​ನಲ್ಲಿ ಮೊದಲ ಸೆಮಿಫೈನಲ್​ ಮತ್ತು ಫೈನಲ್​ಗೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿದೆ. 2ನೇ ಸೆಮಿಫೈನಲ್​ಗೆ 4 ಗಂಟೆ, 10 ನಿಮಿಷಗಳ ಹೆಚ್ಚುವರಿ ಸಮಯವನ್ನಷ್ಟೇ ನೀಡಲಾಗಿದೆ. 2ನೇ ಸೆಮಿಫೈನಲ್​ ಮತ್ತು ಫೈನಲ್​ ನಡುವೆ 1 ದಿನದ ಅಂತರ ಮಾತ್ರ ಇರುವುದರಿಂದ 2ನೇ ಸೆಮೀಸ್​ಗೆ ಮೀಸಲು ದಿನ ನಿಗದಿಯಾಗಿಲ್ಲ. ಇದರೊಂದಿಗೆ ನಾಕೌಟ್​ ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರಕ್ಕೆ ಕನಿಷ್ಠ ತಲಾ 10 ಓವರ್​ಗಳ ಪಂದ್ಯ ಆಡುವುದು ಅಗತ್ಯ ಎಂದೂ ಐಸಿಸಿ ಸ್ಪಷ್ಟಪಡಿಸಿದೆ.

9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ಜೂನ್​ 1ರಂದು ಚಾಲನೆ ಸಿಗಲಿದೆ. ಭಾರತ ತಂಡ ಜೂನ್​ 5ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್​ ವಿರುದ್ಧ ಅಭಿಯಾನ ಆರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net