ಕುವೆಂಪು ಅಧ್ಯಯನ ಸಂಸ್ಥೆಗೆ ಹಂಪನಾ ಮನ್ನಣೆ ತಂದರು: ಡಾ.ಮನು ಬಳಿಗಾರ್

Manu Baligar
Published on

ಬೆಂಗಳೂರು: ಕುವೆಂಪು ಅಧ್ಯಯನ ಸಂಸ್ಥೆಗೆ ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಅಧ್ಯಕ್ಷರಾದ ಬಳಿಕ ಈ ಸಂಸ್ಥೆಗೆ ಮರುಜನ್ಮ ಸಿಕ್ಕಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ.

ಬಿಎಂಶ್ರೀ ಪ್ರತಿಷ್ಠಾನ ವತಿಯಿಂದ ಶನಿವಾರ ಎನ್.ಆರ್.ಕಾಲನಿಯ ಬಿಎಂಶ್ರೀ ಕಲಾಭವನದಲ್ಲಿ ಆಯೋಜಿಸಲಾಗಿದ್ದ ‘ಕಂಬತ್ತಹಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯ, ಸಂಶೋಧನಾ ಕ್ಷೇತ್ರದಲ್ಲಿ ಹಂಪನಾ ಸೇವೆ ಸ್ಮರಣೀಯ. ಅವರು ಜ್ಞಾನ ಭಂಡಾರವಿದ್ದಂತೆ. ಹಳೆಗನ್ನಡದಲ್ಲಿ ಸೊಗಸಾಗಿ ಭಾಷಣ ಮಾಡುವಷ್ಟು ಸಾಮರ್ಥ್ಯ ಇದೆ. ಪಂಪ, ರನ್ನ ರಚಿಸಿದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಇವರು ನಮಗೆಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ನೆಲ, ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ವಿದೇಶಿಗರೂ ಹೆಚ್ಚು ಆಸಕ್ತಿ ತೋರುತ್ತಿರುವುದು ಗಮನಾರ್ಹ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಇನ್ನಷ್ಟು ಬೆಳೆಯಲಿದೆ. ತಾವು ನೆಲೆಸಿದ್ದ ಸ್ಥಳದಲ್ಲಿನ ಭಾಷೆ, ನೆಲದ ಬಗ್ಗೆಯೇ ಸಾಹಿತ್ಯ ರಚಿಸುವುದು ಮುಖ್ಯ. ಹಿಂದಿನ ಸಾಹಿತಿಗಳು ಬೇರೆ ಬೇರೆ ಸಮುದಾಯದಿಂದ ಬಂದರೂ ಕನ್ನಡಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡಿದ್ದರು ಎಂದರು.

ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಅವರಿಗೆ ‘ಕಂಬತ್ತಹಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ನಿವೃತ್ತ ಸರ್ಕಾರಿ ಅಧಿಕಾರಿ ಕೆ.ಜೆ.ಪಾರ್ಶ್ವನಾಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net