ರಾಜ್ಯಾದ್ಯಂತ ಮಳೆ ಬಿರುಸು; ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

Rain
Published on

ಬೆಂಗಳೂರು: ರಾಜ್ಯದ ಹಲವೆಡೆ ಶನಿವಾರವೂ ಮಳೆ ಅಬ್ಬರ ಮುಂದುವರಿದಿದೆ.ಬಾಗಲಕೋಟೆ, ಚಿಕ್ಕಮಗಳೂರು, ಬೆಳಗಾವಿ, ಹಾವೇರಿ, ಕೊಡಗು, ಮಂಡ್ಯ, ಯಾದಗಿರಿ ಸೇರಿ ಹಲವೆಡೆ ವರುಣಾರ್ಭಟ ಜೋರಾಗಿದೆ.

ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನಗಳು ಕಾಲ ಇನ್ನಷ್ಟು ಬಿರುಸುಗೊಳ್ಳಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜುಲೈ 23 ಮತ್ತು 24ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಜುಲೈ 25ರಿಂದ ಮುಂದಿನ ಮೂರು ದಿನ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಜುಲೈ 24ರಂದು ಹೆಚ್ಚು ಮಳೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನದಲ್ಲಿ ಮುಂದಿನ ನಾಲ್ಕು ದಿನ, ಯಾದಗಿರಿ, ಬೆಳಗಾವಿಯಲ್ಲಿ ಮುಂದಿನ ಎರಡು ದಿನ, ಧಾರವಾಡ ಮತ್ತು ಕಲಬುರಗಿಯಲ್ಲಿ ಜುಲೈ 24ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Rain

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ,ವಿಜಯನಗರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.

ಅಧಿಕ ಮಳೆ: ಮುಂಗಾರು ದುರ್ಬಲ ಪರಿಣಾಮ ಒಂದೂವರೆ ತಿಂಗಳ ಕಾಲ ಮಳೆ ಕೊರತೆ ಅನುಭವಿಸಿದ್ದ ರಾಜ್ಯದಲ್ಲಿ ವಾಡಿಕೆಗಿಂತ ತುಸು ಅಧಿಕವಾಗಿ ಸುರಿದಿದೆ. ಜುಲೈ 1ರಿಂದ 22ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 192 ಮಿಮೀ ಮಳೆ ಆಗಬೇಕಿತ್ತು. ಆದರೆ, 215 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.12 ಹೆಚ್ಚು ವರ್ಷಧಾರೆಯಾಗಿದೆ. ತೀವ್ರ ಮಳೆ ಕುಂಠಿತವಾಗಿದ್ದ ಕರಾವಳಿ ಜಿಲ್ಲೆಗಳಲ್ಲಿ ವಾರದಿಂದ ಮಳೆ ಬಿರುಸಾಗಿ ಸುರಿಯುತ್ತಿದ್ದು, ವಾಡಿಕೆಗಿಂತ ಶೇ.20 ಹೆಚ್ಚು ವರ್ಷಧಾರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net