ಪ್ರಾಯೋಜಕತ್ವ ಹೆಚ್ಚಳವಾದರೆ ಸಾಹಿತ್ಯದ ಗುಣಮಟ್ಟ ಕುಸಿತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

bommayi
Published on

ಬೆಂಗಳೂರು: ಸಾಹಿತ್ಯ ಬೆಳವಣಿಗೆಗೆ ಸರ್ಕಾರವು ಪ್ರಾಯೋಜಕತ್ವ ಹೆಚ್ಚಳ ಮಾಡಿದಂತೆ ಸಾಹಿತ್ಯದ ಗುಣಮಟ್ಟ ಕಡಿಮೆಯಾಗಲಿದೆ. ಹೀಗಾಗಿ, ಉತ್ತಮ ಬರಹಗಾರರ ತಂಡ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪುರಭವನದಲ್ಲಿ ಶನಿವಾರ ವಿಶ್ವವಾಣಿ ಪುಸ್ತಕ ಪ್ರಕಟಿಸಿರುವ ವಿವಿಧ 6 ಪುಸ್ತಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕೋದ್ಯಮಕ್ಕೆ ದುಡ್ಡಿನ ಬರ ಬಂದಿಲ್ಲ. ಓದುಗರು ಪುಸ್ತಕ ಖರೀದಿಸಿ ಆ ಹಣ ಸಾಹಿತಿಗಳಿಗೆ ತಲುಪಿಸಿ ಅದು ಮತ್ತೆ ಸಾಹಿತ್ಯಕ್ಕೆ ವಿನಿಯೋಗವಾಗುವ ತನಕ ಪುಸ್ತಕೋದ್ಯಮವು ಕಷ್ಟದಲ್ಲಿಯೇ ಇರಲಿದೆ ಎಂದಿದ್ದಾರೆ.

200 ಪುಟದ ಸಾಹಿತ್ಯಕ್ಕೆ ಸರ್ಕಾರವು ಒಂದು ಲಕ್ಷ ರೂ. ನೀಡಿದರೆ, ವರ್ಷಕ್ಕೆ 5-6 ಪುಸ್ತಕ ಬರೆಯುವ ಸಾಹಿತಿಗಳು ಹುಟ್ಟಿಕೊಳ್ಳುತ್ತಾರೆ. ಹೀಗಾಗಿ, ಸಮಾಜ, ಸರ್ಕಾರ ಮತ್ತು ಸಾಹಿತ್ಯ ನಿರಂತರವಾಗಿ ಒಬ್ಬರಿಗೊಬ್ಬರು ಬೆಂಬಲಿಸುವ ವಾತಾವರಣ ನಿರ್ಮಾಣವಾದಾಗ ಸಾಹಿತ್ಯವು ಉತ್ಕ ೃಷ್ಟವಾಗುವ ಜತೆಗೆ ಓದುಗರಿಗೂ ಲಾಭವಾಗಲಿದೆ.

ಬೈಯ್ಯೋಕ್ಕಾದ್ರೂ ರಾಜಕಾರಣಿಗಳು ಬೇಕು

ಪತ್ರಿಕೆ ಮತ್ತು ರಾಜಕಾರಣ ಪರಸ್ಪರ ಒಬ್ಬರಿಗೊಬ್ಬರು ಬೇಕೇ ಬೇಕು. ರಾಜಕಾರಣಿಗಳಿಗೆ ಬೈಯ್ಯುವುದಕ್ಕಾದರೂ, ಪತ್ರಿಕೆಗಳಿಗೆ ರಾಜಕೀಯ ಬರೆಯುವುದಕ್ಕಾರೂ ರಾಜಕೀಯ ಬೇಕು. ರಾಜಕಾರಣಗಳು ತುಂಬಾ ಭ್ರಮೆಯಲ್ಲಿರುತ್ತೇವೆ. ಆದರೆ, ಜನರಿಗೆ ಸತ್ಯ, ಸುಳ್ಳು ಯಾವುದು ಸರಿಯಾಗಿ ತಿಳಿದಿದೆ.

ಮಾತನಾಡುವವರಿಗಿಂತ ಕೇಳಿಸಿಕೊಳ್ಳುವವರು, ಬರೆಯುವವರಿಂತ ಓದುವವರು ಬುದ್ಧಿವಂತರೆಂದು ತಿಳಿದು ಬರೆದಾಗ ಬರವಣಿಗೆ ಅರ್ಥಪೂರ್ಣವಾಗಿರುತ್ತದೆ ಎಂದರು. ಪ್ರಸ್ತುತ ಜಗತ್ತಿನಲ್ಲಿ ಮುಂದಿನ 25 ವರ್ಷ ಭಾರತ ಹೇಗಿರಲಿದೆ ಮತ್ತು ಹೇಗಿರಬೇಕು ಎಂಬ ಸಾಹಿತ್ಯ ಪ್ರಕಟವಾದರೆ ಬೆಲೆ ಬರಲಿದೆ. ವಿಶ್ವೇಶ್ವರ ಭಟ್ ಅವರಲ್ಲಿ ಅಂತಹ ಪ್ರಸ್ತುತತೆಯನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ.

ಭಗವದ್ಗೀತೆಯಲ್ಲಿ ಎಲ್ಲದಕ್ಕೂ ಉತ್ತರ

ನಾನು ನಿರ್ಧಾರ ಕೈಗೊಳ್ಳಲು ಗೊಂದಲವುಂಟಾದ ಸಮಯದಲ್ಲಿ ಭಗವದ್ಗೀತೆಯನ್ನು ಓದುತ್ತೇನೆ. ಭಗದ್ಗೀತೆಯಲ್ಲಿ ಎಂತಹ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಬಹುದಾದ ಪ್ರೇರಣಾದಾಯಕ ಸಾಹಿತ್ಯವಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೃತಿಕಾರರಾದ ರೂಪಾ ಗುರುರಾಜ್, ಶಿಶಿರ ಹೆಗಡೆ ಮತ್ತು ಕಿರಣ್ ಉಪಾಧ್ಯಾಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net