

ಕನಕಪುರ: ದೇಸಿ ಗೋವಿನ ತಳಿಗಳಲ್ಲಿ ವಿನಾಶದ ಅಂಚಿನಲ್ಲಿರುವ ಹಳ್ಳಿಕಾರ್ ತಳಿಯ ಹೋರಿಯೊಂದರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ತಾಲೂಕಿನ ಕಸಬಾ ಹೋಬಳಿ ತಿಗಳರ ಹೊಸಹಳ್ಳಿ ಗ್ರಾಮಸ್ಥರು ಈ ತಳಿಯ ಮಹತ್ವದ ಕುರಿತು ಗಮನ ಸೆಳೆದಿದ್ದಾರೆ.
ಅಪ್ಪಟ ಕೆಲಸಗಾರ ತಳಿ ಎಂದೇ ಗುರುತಿಸಿಕೊಂಡಿರುವ ಹಳ್ಳಿಕಾರ್ ತಳಿಯ ಅಭಿಮನ್ಯು ಹೆಸರಿನ ಎತ್ತಿಗೆ (ಹೋರಿ) ಬುಧವಾರ ಮೊದಲ ವರ್ಷದ ಹುಟ್ಟುಹಬ್ಬ. ಈ ಸಂಭ್ರಮದ ನಿಮಿತ್ತ ಗ್ರಾಮದಲ್ಲಿ ಕೇಕ್ ಕತ್ತರಿಸಿ, ಆಕರ್ಷಕ ಮೆರವಣಿಗೆ ನಡೆಸಿ, ಗ್ರಾಮ ದೇವತೆಗಳ ಅದ್ಧೂರಿ ಉತ್ಸವವನ್ನೂ ನಡೆಸಲಾಯಿತು.
ಗ್ರಾಮದ ದೊಡ್ಡಯ್ಯ ಎಂಬುವವರು ಸಾಕಿರುವ ಈ ಹೋರಿ ಹಳ್ಳಿಕಾರ್ ತಳಿಯ ಬಿತ್ತನೆ ಹೋರಿಯಾಗಿದ್ದು, ಸುತ್ತಮುತ್ತಲ ಗ್ರಾಮಗಳ ಹಸುಗಳ ತಳಿಯ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ವರ್ತೂರ್ ಸಂತೋಷ್ ಪಾಲ್ಗೊಂಡಿದ್ದರು. ಇತ್ತೀಚೆಗೆ ದೇಸಿ ತಳಿಯ ಹಸುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ.
ದೇಶೀಯ ಹಸುಗಳನ್ನು ಸಾಕುವುದರಿಂದ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುವುದೂ ಅಲ್ಲದೆ, ಬಹು ಬೇಡಿಕೆಯಿರುವ ಹಾಲನ್ನು ಪಡೆಯಬಹುದು. ಆದ್ದರಿಂದ ನಶಿಸುತ್ತಿರುವ ನಾಟಿ ಹಸುಗಳ ಸಂರಕ್ಷಣೆಯನ್ನು ಗ್ರಾಮಸ್ಥರು ಉಳಿಸಿ ಬೆಳೆಸುವಂತೆ ಕರೆ ನೀಡಿದರು. ಗ್ರಾಮದ ದೊಡ್ಡಯ್ಯ, ಶ್ರೀನಿವಾಸ್, ಲಕ್ಷ್ಮಿನಾರಾಯಣ್, ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.