

ಕಡೂರು: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಸರ ಕಾಳಜಿ ಮೂಡಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಜಿಗಣೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ಪಟ್ಟಣದ ಗುರುಕುಲ ಪಬ್ಲಿಕ್ ಶಾಲೆಯಿಂದ ಶನಿವಾರ ವನಮಹೋತ್ಸ ಅಂಗವಾಗಿ ಪಟ್ಟಣದ ಡಿಪೋ ಮಾರ್ಗದ ರಸ್ತೆ ಬದಿಯಲ್ಲಿ ಗಿಡಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಮಾಲಿನ್ಯದಿಂದ ಮನುಷ್ಯ ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾನೆ. ಇದನ್ನು ತಡೆಯಲು ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು. ಗುರುಕುಲ ಶಾಲೆ ಆಡಳಿತ ಮಂಡಳಿಯು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೂ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಗುರುಕುಲ ಶಾಲೆ ಕಾರ್ಯದರ್ಶಿ ಸಿ.ಬಿ.ಗಿರೀಶ್ ಮಾತನಾಡಿ, ಶಾಲೆಯಿಂದ ವನಮಹೋತ್ಸವ ಅಂಗವಾಗಿ ಕೆಎಂ ರಸ್ತೆಯಿಂದ ಕೆಎಸ್‌ಆರ್‌ಟಿಸಿ ಡಿಪೋ ರಸ್ತೆ ಬದಿ 10 ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಯನ್ನು ಶಾಲೆಯಿಂದಲೇ ಮಾಡಲಾಗುತ್ತದೆ. ಸಾಮಾಜಿಕ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು. ಪುರಸಭೆ ಸದಸ್ಯ ಮೋಹನ್ ನಾಯ್ಕ, ಶಾಲೆ ನಿರ್ದೇಶಕ ಸಿ.ಎಂ.ಪುನೀತ್, ಶಿಕ್ಷಕರು ಇದ್ದರು.