ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ: ಕಟಿಂಗ್ ಶಾಪ್​ನಲ್ಲಿ ರೌಡಿ ಶೀಟರ್​ಗೆ ಗುಂಡೇಟು, ಚೆಲ್ಲಿದ ರಕ್ತ! Bheema theera

Bheema theera
Published on

Bheema theera : ವಿಜಯಪುರದ ಭೀಮಾತೀರದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದೆ. ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ರೌಡಿ ಶೀಟರ್ ಭೀಮನಗೌಡ ಬಿರಾದಾರ್ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ.

ರೌಡಿಶೀಟರ್​ ಭೀಮನಗೌಡ ಬಿರಾದಾರ್ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಗಿದ್ದು, ತಲೆ ಹಾಗೂ ಎದೆಗೆ ಗುಂಡುಗಳು ತಗುಲಿವೆ. ಗಂಭೀರ ಗಾಯಗೊಂಡಿರುವ ಬಿರಾದಾರ್​ನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಬಿರಾದಾರ್​, ಭೀಮಾತೀರದ ಮಹಾದೇವ ಬೈರಗೊಂಡ ಪರಮಾಪ್ತ ಹಾಗೂ ಬಲಗೈ ಬಂಟ. ಮೂರರಿಂದ ನಾಲ್ಕು ಮಂದಿ ಮುಸುಕುಧಾರಿಗಳಿಂದ ಈ ಕೃತ್ಯ ನಡೆದಿದೆ. ಗುಂಡು ಹಾರಿಸಿದ ಬಳಿಕ‌ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಬಿರಾದಾರ್​, ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್​ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಈ ವೇಳೆ ಎಂಟ್ರಿ ಕೊಟ್ಟ ದುಷ್ಕರ್ಮಿಗಳು, ಕಟಿಂಗ್ ಮಾಡುವವನ ಕಣ್ಣಿಗೆ ಖಾರದ ಪುಡಿ ಎರಚಿ ಗುಂಡು ಹಾರಿದ್ದಾರೆ. ಗುಂಡೇಟು ತಿಂದು, ಸ್ಥಳದಲ್ಲಿ ರಕ್ತಸಿಕ್ತವಾಗಿ ಒದ್ದಾಡುತ್ತಿದ್ದ ಬಿರಾದಾರ್​ನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಹಳೆಯ ವೈಷಮ್ಯದ ಹಿನ್ನಲೆ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಡತನ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಬೆಂಡೆಗುಂಬಳ್ ಹಾಗೂ ಇನ್ನಿತರ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೇವರನಿಂಬರಗಿ ಗ್ರಾಮದಲ್ಲಿ ಭಯದ ವಾತಾವರಣ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net