ಅಹಮದಾಬಾದ್: ಕಳೆದ ಮೂರು ದಿನಗಳಿಂದ ಗುಜರಾತಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಅನಾಹುತಗಳಲ್ಲಿ ಸುಮಾರು 28 ಮಂದಿ ಮೃತಪಟ್ಟಿದ್ದಾರೆ. 18 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರವಾಹ ಪೀಡಿತ ಸ್ಥಳದಿಂದ ಸುರಕ್ಷಿತ ತಾಣಕ್ಕೆ ರವಾನಿಸಲಾಗಿದ್ದು, ಸುಮಾರು 11 ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಗುಜರಾತ್ ಸರ್ಕಾರ ಹಂಚಿಕೊಂಡ ವಿವರಗಳ ಪ್ರಕಾರ, ಮೋರ್ಬಿ, ವಡೋದರಾ, ಭರೂಚ್, ಜಾಮ್‌ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಆನಂದ್ ಜಿಲ್ಲೆಯಲ್ಲಿ ಆರು, ಅಹಮದಾಬಾದ್‌ನಲ್ಲಿ ನಾಲ್ಕು, ಗಾಂಧಿನಗರ, ಖೇಡಾ, ಮಹಿಸಾಗರ್, ದಾಹೋದ್ ಮತ್ತು ಸುರೇಂದ್ರನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.
ಮೃತರ ಪೈಕಿ ಏಳು ಜನರು ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಕ್ರಾಸ್‌ವೇ ದಾಟುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಗುರುವಾರ ಗುಜರಾತ್‌ನಾದ್ಯಂತ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 22 ಜಿಲ್ಲೆಗಳಿಗೆ ಹಳದಿ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ. ಆಳವಾದ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕಚ್ಛ್, ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್, ರಾಜ್‌ಕೋಟ್, ಬೊಟಾಡ್, ಗಿರ್ ಸೋಮನಾಥ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ಹೆಚ್ಚುವರಿಯಾಗಿ, ಉತ್ತರ, ಮಧ್ಯ ಮತ್ತು ದಕ್ಷಿಣ ಗುಜರಾತ್‌ಗೆ ಹಳದಿ ಅಲರ್ಟ್ ನೀಡಲಾಗಿದೆ. ವಡೋದರದಲ್ಲಿ ಮಳೆ ನಿಂತಿದ್ದರೂ ವಿಶ್ವಾಮಿತ್ರಿ ನದಿ ಉಕ್ಕಿ ಹರಿಯುತ್ತಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವಾರು ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಘಟನೆಗಳು ವರದಿಯಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಮತ್ತು ರಾಜ್ಯಕ್ಕೆ ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯದಾದ್ಯಂತ ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ 6,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)
ರೋಹಿತ್ ಶರ್ಮಗೆ 50 ಕೋಟಿ ರೂ. ಓಪನ್ ಆಫರ್? LSG ಮಾಲೀಕ ಕೊಟ್ಟ ಉತ್ತರ ವೈರಲ್