Lucky ಕಾರನ್ನು ಸಮಾಧಿ ಮಾಡುವ ಮೂಲಕ ವಿಭಿನ್ನವಾಗಿ ವಿದಾಯ ಹೇಳಿದ ಕುಟುಂಬ; ನೀಡಿದ ಕಾರಣ ಮನಕಲಕುತ್ತೆ

Car Funeral
Published on

ಅಮ್ರೇಲಿ: ನಾವು ನೋಡಿದಂತೆ ಹೆಚ್ಚಿನವರು ತಾವು ಇಷ್ಪಟ್ಟು ಖರೀದಿಸಿದ ವಸ್ತುಗಳನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಾರೆ. ಯಾರೇ ಆದರೂ ತಾವು ಇಷ್ಟಪಟ್ಟು ಖರೀದಿಸಿದ ಮೊದಲ ವಸ್ತುವನ್ನು ತುಂಬಾ ಜೋಪಾನ ಮಾಡಿಕೊಂಡು ಬರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ​ ತನ್ನ ಬದುಕನ್ನೇ ಬದಲಾಯಿಸಿದ ವಸ್ತು ಒಂದಕ್ಕೆ ವಿನೂತನವಾಗಿ ವಿದಾಯ (Honourable Farewell) ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಈತನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಮ್ರೇಲಿ ಜಿಲ್ಲೆಯ ಲಠೀ ತಾಲ್ಲೂಕಿನ ಪದಾರ್‌ಶಿಂಗ ಗ್ರಾಮದ ವ್ಯಕ್ತಿಯೊಬ್ಬರು ತಾವು 18 ವರ್ಷಗಳ ಹಿಂದೆ ಇಷ್ಟಪಟ್ಟು ಖರೀದಿಸಿದ ಕಾರನ್ನು ಸಮಾಧಿ (Samadhi) ಮಾಡುವ ಮೂಲಕ ಅದಕ್ಕೆ ವಿಭಿನ್ನವಾಗಿ ವಿದಾಯ ಹೇಳಿದ್ದಾರೆ. ಗ್ರಾಮಸ್ಥರು, ಅರ್ಚಕರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ 1,500 ಅಧಿಕ ಮಂದಿ ಭಾಗಿಯಾಗಿದ್ದು, ಈ ಸುದ್ದಿ ಸದ್ಯಕ್ಕೆ ವೈರಲ್​ ಆಗುತ್ತಿದೆ.

ವೃತ್ತಿಯಲ್ಲಿ ಬಿಲ್ಡರ್​ ಆಗಿರುವ ಸಂಜಯ್​ ಪೊಲ್ರಾ ಎಂಬುವವರು 2006ರಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಗನಾರ್​ ಕಾರನ್ನು ಖರೀದಿಸಿದ್ದರು. ಸೌರಾಷ್ಟ್ರ ಮೂಲದವರಾದ ಸಂಜಯ್​ ಕೆಲಸ ಅರಸಿಕೊಂಡು ಸೂರತ್‌ಗೆ ವಲಸೆ ಹೋಗಿದ್ದರು. ರಿಯಲ್​ ಎಸ್ಟೇಟ್​ ದಲ್ಲಾಳಿಯಾಗಿ ವೃತ್ತಿ ಆರಂಭಿಸಿದ ಸಂಜಯ್​ ನಂತರದ ದಿನಗಳಲ್ಲಿ ದೊಡ್ಡ ಬಿಲ್ಡರ್​ ಆದರು. ಹೀಗಾಗಿ ಅವರ ಬದುಕನ್ನು ಬದಲಾಯಿಸಿದ ಅದೃಷ್ಟದ ಕಾರನ್ನು (Lucky Car) ಸಮಾಧಿ ಮಾಡುವ ಮೂಲಕ ವಿಭಿನ್ನವಾಗಿ ವಿದಾಯ ಹೇಳಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನೂ ಈ ಕುರಿತು ಮಾತನಾಡಿರುವ ಸಂಜಯ್​, ಈ ಕಾರು ಕುಟುಂಬಕ್ಕೆ ಏಳಿಗೆಯನ್ನು ತಂದಿದ್ದು ಮಾತ್ರವಲ್ಲದೇ, ಸಮಾಜದಲ್ಲಿ ಕುಟುಂಬದ ಗೌರವವನ್ನು ಹೆಚ್ಚಿಸಿದೆ. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ನೆಚ್ಚಿನ ಕಾರನ್ನು ನಮ್ಮ ನೆನಪಿನಲ್ಲಿ ಸದಾ ಇರಿಸುವುದಕ್ಕಾಗಿ ಅದನ್ನು ಸಮಾಧಿ ಮಾಡಲು ಯೋಜಿಸಿದ್ದೇವೆ.

2006ರಲ್ಲಿ ಕಾರನ್ನು ಖರೀದಿಸಿದ್ದೆ. ಅದು ನನ್ನ ಅದೃಷ್ಟವನ್ನೇ ಬದಲಾಯಿಸಿತ್ತು. ಅದನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಹಾಗಾಗಿ,  ಬೇರೆ ಯಾವುದೇ ಯೋಚನೆ ಮಾಡದೆ ಅದನ್ನು ಸಮಾಧಿ ಮಾಡಿದ್ದೇನೆ. ಇವತ್ತು ನಾನು ಬಿಲ್ಡರ್‌ ಆಗಿದ್ದು, ಔಡಿ ಕಾರನ್ನೂ ಹೊಂದಿದ್ದೇನೆ. ಕಾರಿನ ಸಮಾಧಿ ಎಂಬುದನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ನನ್ನ ಕಾರಿಗೆ ಇದುವೇ ಸೂಕ್ತವಾದ ವಿದಾಯ ಎಂದುಕೊಂಡು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ಆಹ್ವಾನ ಪತ್ರಿಕೆ ಮಾಡಿಸಿ ಹಂಚಲಾಗಿದೆ ಎಂದು ಕಾರಿನ ಮಾಲೀಕ ಸಂಜಯ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net