

ಆರ್ಡಿ: ಹಿರಿಯರ ಮಾರ್ಗದರ್ಶನ, ಆದರ್ಶಗುಣ ಸಮಾಜದಲ್ಲಿ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಶೇಡಿಮನೆ ನಾರಾಯಣ ಮಾಸ್ಟರ್ ಸಾಮಾಜಿಕ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದು, ನಿತೀಶ್ ಮೆಮೋರಿಯಲ್ ಟ್ರಸ್ಟ್ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಶೇಡಿಮನೆ ಪಾಟ್ಲಮಕ್ಕಿಯಲ್ಲಿ ನಿತೀಶ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಂಗಳವಾರ ನಿತೀಶ್ ನಾರಾಯಣ ಸ್ಮಾರಕ ಮಂಟಪ ಉದ್ಘಾಟಿಸಿ ಮಾತನಾಡಿದರು.
ಶೇಡಿಮನೆ ನಿತೀಶ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಚೆನ್ನ ಪೂಜಾರಿ ಅಧ್ಯಕ್ಷತೆ ವಹಿಸಿದರು. ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ, ಹೆಬ್ರಿ ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ಬಿಲ್ಲವ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಕ್ರಮಧಾರಿ ಅರಸಮ್ಮಕಾನು, ಟ್ರಸ್ಟ್ ಪದಾಧಿಕಾರಿಗಳು, ನಿವೃತ್ತ ಶಿಕ್ಷಕ ದಿ.ನಾರಾಯಣ ಪೂಜಾರಿ ಪಾಟ್ಲಮಕ್ಕಿ ಕುಟುಂಬಸ್ಥರು ಉಪಸ್ಥಿತರಿದ್ದರು.ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಅವರಿಗೆ ಶೇಡಿಮನೆ ನಾರಾಯಣ ಮಾಸ್ಟರ್ ಸಾಧಕ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಶಿಕ್ಷಕ ಸತೀಶ್ ಪೂಜಾರಿ ಸ್ವಾಗತಿಸಿ, ದಿಶಾ, ವರ್ಷಾ, ಶಾರಧ್ಯ ಪ್ರಾರ್ಥಿಸಿದರು. ಶಿಕ್ಷಕ ರಾಜೀವ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಪೂಜಾರಿ ಪಾಟ್ಲಮಕ್ಕಿ ವಂದಿಸಿದರು.