

ಪಡುಬಿದ್ರಿ: ಏಕಾಗ್ರತೆ, ಉತ್ತಮ ಓದು, ಸಾಕಷ್ಟು ಪೂರ್ವ ತಯಾರಿಯಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಖಂಡಿತ ಲಭಿಸುತ್ತದೆ. ಅಂಕದೊಂದಿಗೆ ಭಾರತೀಯತೆ, ನಮ್ಮ ಸಂಸ್ಕೃತಿ ಮತ್ತು ವಿಶೇಷ ಸಾಧನೆ ಕೆಲಸಮಾಡಬೇಕು. ಸಮಯ ಕೇವಲ ಮನೋರಂಜನೆಗೆ ವ್ಯರ್ಥ ಮಾಡದೆ ಸಮಾಜಕ್ಕೆ ಉಪಯೋಗವಾಗುವ ಮಹತ್ಕಾರ್ಯ ಸಾಧಿಸಿ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಂದಿನ ಮಾರ್ಚ್‌ನಲ್ಲಿ ನಡೆಯಲಿರುವ ಪಬ್ಲಿಕ್ ಪರೀಕ್ಷೆ ಪೂರ್ವಭಾವಿಯಾಗಿ ಸೋಮವಾರ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪಬ್ಲಿಕ್ ಪರೀಕ್ಷೆ ಬರೆಯುವ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಹಾಗೂ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಎಲ್ಲ ವಿದ್ಯಾರ್ಥಿಗಳು ಹಾಗೂ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಿ ಪೂಜ್ಯ ಸ್ವಾಮೀಜಿ ಅವರಿಂದ ಪೆನ್ನು ಹಾಗೂ ಪ್ರಸಾದರೂಪದ ಲಡ್ಡು ಸ್ವೀಕರಿಸಿದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕೋಶಾಧಿಕಾರಿ ಗಣೇಶ ಹೆಬ್ಬಾರ್, ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ, ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. ಭೌತಶಾಸ್ತ್ರ ಉಪನ್ಯಾಸಕ ತೇಜಸ್ ಬಲ್ಲಾಳ್ ವಂದಿಸಿದರು. ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುನಾಥ ಎ.ವಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮ ನೆರವೇರಿಸಿದರು.