

ಮೈಸೂರು: 2017ರಲ್ಲಿ ಕಾಂಗ್ರೆಸ್ ಸರ್ಕಾರ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (GT Devegowda) ಹಾಗೂ ಅವರ ಪುತ್ರನನ್ನು ಬಂಧಿಸಲು ಸಿದ್ಧತೆ ನಡೆಸಿತ್ತು. ಕುಮಾರಸ್ವಾಮಿ ಇರಲಿಲ್ಲವೆಂದರೆ ಅಪ್ಪ-ಮಗ ಇಬ್ಬರು ಜೈಲಿನಲ್ಲಿರುತ್ತಿದ್ದರು ಎಂಬ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ (HD Revanna) ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಿ.ಟಿ. ದೇವೇಗೌಡ (GT Devegowda) ನಾನು ಅಥವಾ ನನ್ನ ಮಗನಿಗೆ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ. ಅಂತಹ ಕೆಲಸವನ್ನೇನೂ ನಾವು ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ (GT Devegowda), ನಾನು ಅಥವಾ ನನ್ನ ಮಗನಿಗೆ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ. ಅಂತಹ ಕೆಲಸವನ್ನೇನೂ ನಾವು ಮಾಡಿಲ್ಲ. ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು. ನನ್ನ ವಿರುದ್ಧ ಆ ಹೇಳಿಕೆ ನೀಡಿದ್ದೇಕೆ ಎಂದು ರೇವಣ್ಣ (HD Revanna) ಅವರನ್ನು ಬೆಳಗಾವಿ ಅಧಿವೇಶನಕ್ಕೆ ಬಂದಾಗ ನೇರವಾಗಿ ಕೇಳುತ್ತೇನೆ.
ನಾನು ಮಾಧ್ಯಮಗಳಿಂದ ದೂರವಿದ್ದೇನೆ. ಏನನ್ನೂ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ. ಆದರೂ ಪದೇ ಪದೇ ನನ್ನ ಹೆಸರನ್ನೇಕೆ ತೆಗೆಯುತ್ತಾರೆ. ನನ್ನ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೇನೂ ವಿಚಾರ ನನ್ನ ತಲೆಯಲ್ಲಿಲ್ಲ. ನಾನು 15 ವರ್ಷದವನಾಗಿದ್ದಲೇ ಯುವಕರ ಬಳಗ ಕಟ್ಟಿದ್ದೆ. ಪ್ರಶಸ್ತಿ ಪಡೆದಿದ್ದೆ. ನಾನಿಲ್ಲದೆ ಯಾವುದೇ ತೀರ್ಮಾನವನ್ನೂ ಗ್ರಾಮಸ್ಥರು ಮಾಡುತ್ತಿರಲಿಲ್ಲ. ಅದರಿಂದ ಜನ ಸೇವೆಗೆ ಉತ್ಸಾಹ ಬಂದಿತು. ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರ, ಸಹಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲ ರೀತಿಯ ಅನುಭವವನ್ನೂ ಪಡೆದಿದ್ದೇನೆ. ನಮ್ಮ ತಂದೆ ಪಟೇಲರಾಗಿದ್ದರು. ಅವರ ಮೇಲೆ ಒಂದು ಪ್ರಕರಣವೂ ಇರಲಿಲ್ಲ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿರಲಿಲ್ಲ.
ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷಗಳಾಗಿವೆ. ರಾಜಕೀಯವಾಗಿ ನನ್ನ ವಿರುದ್ಧ ಯಾರೂ ದೂರು ನೀಡಿಲ್ಲ. ನನ್ನ ಮಗ ಹರೀಶ್ ಗೌಡ 2010ರಿಂದ ಸಾರ್ವಜನಿಕ ಸೇವೆಯಲ್ಲಿದ್ದಾನೆ. ಆತನ ವಿರುದ್ಧವೂ ಯಾವುದೇ ಪ್ರಕರಣವಿಲ್ಲ. ದೂರಿಲ್ಲ. ದಬ್ಬಾಳಿಕೆ ನಡೆಸುವುದು ಅಥವಾ ಏಕವಚನದಲ್ಲಿ ಮಾತನಾಡುವುದನ್ನು ನಾವು ಮಾಡಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲೆಂದು ಬಯಸಿ ಬಿಜೆಪಿ ಸೇರಿದ್ದೆ. ನಾನು ಸೋತಾಗ ಯಡಿಯೂರಪ್ಪ ಅವರು ನನ್ನನ್ನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಅಂದು ಕಾಂಗ್ರೆಸ್ ಹಾಗೂ ಜೆಡಿಎಸ್ನವರಿಂದ ನನ್ನ ತೇಜೋವಧೆ ಕೆಲಸ ನಡೆದಿತ್ತು. ಆಗಲೂ ನಾನು ಯಾರ ಮೂಲಕವೂ ಕರೆ ಮಾಡಿಸಿಲ್ಲ. ಸಿದ್ದರಾಮಯ್ಯ ಅವರಿಂದಲೂ ಒಮ್ಮೆಯೂ ಕರೆ ಮಾಡಿಸಿಲ್ಲ. ರಕ್ಷಿಸುವಂತೆ ಕುಮಾರಸ್ವಾಮಿ ಬಳಿಯೂ ಕೇಳಿಲ್ಲ. ಜೈಲಿಗೆ ಹೋಗುವಂತಹ ಅಪರಾಧವನ್ನು ನಾನಾಗಲಿ, ನನ್ನ ಮಗನಾಗಲಿ ಮಾಡಿಲ್ಲ. ರೇವಣ್ಣ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆಯೋ ಗೊತ್ತಿಲ್ಲ.
ಸಿದ್ದರಾಮಯ್ಯ (Siddaramaiah) ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ, ವೈಯಕ್ತಿಕವಾಗಿ ಏನನ್ನೂ ಮಾಡಿಲ್ಲ. ನನ್ನನ್ನೂ ಬಂಧಿಸುವಂತಹ ಸೇಡನ್ನು ಯಾರೂ ಇಟ್ಟುಕೊಂಡಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಎಚ್.ಡಿ. ರೇವಣ್ಣ. ಅವರು ಸಮ್ಮಿಶ್ರ ಸರ್ಕಾರದಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು. ಆ ಬಗ್ಗೆ ರೇವಣ್ಣ ಒಪ್ಪಿ ಕ್ಷಮೆಯನ್ನೂ ಕೇಳಿದ್ದಾರೆ. ಡಿಸಿಎಂ ಆಗಲಾಗುತ್ತಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರಿಗಿದ್ದ ಅವಕಾಶವನ್ನು ದೊಡ್ಡಗೌಡರ ಜೊತೆ ಮಾತನಾಡಿ ತಪ್ಪಿಸಿದ್ದರು ಎಂದು ಎಚ್.ಡಿ. ರೇವಣ್ಣ (HD Revanna) ವಿರುದ್ಧ ಆರೋಪಿಸಿದ್ದಾರೆ.