

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಆರಂಭವಾಗುತ್ತಿದ್ದಂತೆ ತುಂಬಾ ಬಿರುಸು ಪಡೆದುಕೊಂಡಿದ್ದ ನೋಂದಣಿ ಪ್ರಕ್ರಿಯೆ ಇದೀಗ ನೀರಸವಾಗಿದೆ. ಈಗಾಗಲೇ ಕೋಟ್ಯಂತರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಇನ್ನು ಕೋಟ್ಯಂತರ ಮಂದಿ ನೋಂದಣಿ ಮಾಡಿಕೊಳ್ಳಬೇಕಿದೆ. ಹೀಗಾಗಿ ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ನೋಂದಣಿ ಮಾಡಿಕೊಳ್ಳಲು ಇಂಧನ ಇಲಾಖೆ ಮುಂದಾಗಿದೆ.
ಆಯಾ ವಲಯದ ಎಸ್ಕಾಂಗಳು ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಎಸ್ಕಾಂಗಳು ಚಿಂತನೆ ನಡೆಸಿವೆ.
ಗೃಹಜ್ಯೋತಿ ಯೋಜನೆಗೆ ಜುಲೈ ಒಂದರಂದು ಚಾಲನೆ ನೀಡಲಾಯಿತು. ಈವರೆಗೆ 1 ಕೋಟಿಗೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ನಿತ್ಯವು 6 ರಿಂದ 8 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ನೋಂದಣಿ ನೀರಸವಾಗಿದೆ. ಇದಕ್ಕೆ ಮಾಹಿತಿಯ ಕೊರತೆ ಕಾರಣ ಇರಬಹುದು ಎನ್ನಲಾಗಿದೆ. ಹೀಗಾಗಿ ಗಾಮೀಣ ಭಾಗಗಳಲ್ಲಿ ಯಾರೂ ಈವರೆಗೂ ನೋಂದಣಿ ಮಾಡಿಕೊಂಡಿಲ್ಲವೋ ಅವರ ಬಳಿ ನೇರವಾಗಿ ತೆರಳಿ ನೋಂದಣಿ ಮಾಡಿಕೊಳ್ಳಲು ಎಸ್ಕಾಂಗಳು ನಿರ್ಧರಿಸಿವೆ.
ಇನ್ನು ಗೃಹಜ್ಯೋತಿ ಅರ್ಜಿ ಸಲ್ಲಿಗೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಎಲ್ಲ ಎಸ್ಕಾಂಗಳು ಗ್ರಾಹಕರಲ್ಲಿ ಮನವಿ ಮಾಡುತ್ತಿವೆ. ಎಸ್ಕಾಂಗಳ ಮೀಟರ್ ರೀಡರ್ಗಳಿಗೆ ನೋಂದಣಿ ಜವಾಬ್ದಾರಿಯನ್ನು ನೀಡಲಾಗುತ್ತದೆ. ಅಗತ್ಯಬಿದ್ದರೆ ಶೀಘ್ರದಲ್ಲೇ ಮೀಟರ್ ರೀಡರ್ಗಳು ಕೆಲಸವನ್ನು ಆರಂಭಿಸಲಿದ್ದಾರೆ.
ಇನ್ನು ಆರಂಭದಲ್ಲಿ ಸರ್ವರ್ ಡೌನ್ ಇದ್ದರಿಂದ ಕೆಲವೊಂದು ಅರ್ಜಿಗಳು ಸ್ವೀಕೃತವಾಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಇಂಧನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೆ? ಅರ್ಜಿಯ ಸ್ಟೇಟಸ್ ಏನಿದೆ? ಎಂಬುದನ್ನು ತಿಳಿಯಲು ಈ ಮುಂದಿನ ವಿಧಾನವನ್ನು ಅನುಸರಿಸಿ. https://sevasindhu.karnataka.gov.in/StatucTrack/Track_Status ಲಿಂಕ್ ಮೇಲೆ ಕ್ಲಿಕ್ಕಿಸಿ. ಬಳಿಕ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಎಂಬ ಪುಟ ತೆರೆದುಕೊಳ್ಳುತ್ತದೆ. ಬಳಿಕ ಮೊದಲ ಬಾಕ್ಸ್ನಲ್ಲಿ ನಿಮ್ಮ ವ್ಯಾಪ್ತಿಯ ಎಸ್ಕಾಂ ಹೆಸರನ್ನು ಆಯ್ಕೆ ಮಾಡಿ. ಬಳಿಕ ಎರಡನೇ ಬಾಕ್ಸ್ನಲ್ಲಿ ನಿಮ್ಮ ವಿದ್ಯುತ್ ಬಿಲ್ನ ಖಾತೆ ಸಂಖ್ಯೆಯನ್ನು ನಮೂದಿಸಿ. ಬಳಿಕ ಚೆಕ್ ಸ್ಟೇಟಸ್ ಎಂಬ ಐಕಾನ್ ಮೇಲೆ ಕ್ಲಿಕ್ಕಿಸಿ. ಆ ನಂತರ ಒಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ, ಅರ್ಜಿಯ ರೆಫೆರೆನ್ಸ್ ನಂಬರ್, ನಿಮ್ಮ ವಿದ್ಯುತ್ ಬಿಲ್ ಖಾತೆ ಸಂಖ್ಯೆ ಗೋಚರಿಸುತ್ತದೆ. ಅದರ ಕೆಳಗೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ತಿಳಿಯಲಿದೆ. ಯಶಸ್ವಿ ಅಥವಾ ಪ್ರಕ್ರಿಯೆಯಲ್ಲಿದೆ ಎಂದು ಬಂದರೆ ನಿಮ್ಮ ಅರ್ಜಿ ಸ್ವೀಕೃತವಾಗಿದೆ ಎಂದರ್ಥ. ನಿಮ್ಮ ಅರ್ಜಿ ಸ್ವೀಕೃತವಾಗಿರದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.