

ಭೋಪಾಲ್: ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಡುವ ಪ್ರಯತ್ನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೊರ್ಸಾ ಗ್ರಾಮದಲ್ಲಿ ನಡೆದಿದೆ. ಮದುವೆಯನ್ನು ಪೊಲೀಸರು ತಡೆದಿದ್ದು, ಮದುವೆ ಆಗದ ಸಿಟ್ಟಿನಿಂದಾಗಿ ವರ, ವಧುವಿನ ತಂಗಿಯನ್ನೇ ಹೊತ್ತೊಯ್ದಿರುವ ಘಟನೆ ನಡೆದಿದೆ.
ದಲಿತ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಹಸೆಮಣೆ ಮೇಲೆ ಕೂರಿಸಿ ಮದುವೆ ಮಾಡುವ ಪ್ರಯತ್ನ ಮಾಡಲಾಗುತ್ತಿತ್ತು. ಈ ವಿಚಾರವಾಗಿ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ದೂರು ಬಂದಿದೆ. ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ಮದುವೆ ನಿಲ್ಲಿಸಿದ್ದಾರೆ. ಆದರೂ ಕೇಳದ ವರ, ಎಲ್ಲರ ಕಣ್ತಪ್ಪಿಸಿ ವಧುವಿಗೆ ಸಿಂಧೂರ ಇಟ್ಟಿದ್ದಾನೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮದುವೆಯನ್ನು ತಡೆದ ಪೊಲೀಸರು ವಧು ಮತ್ತು ವರನ ಕುಟುಂಬಕ್ಕೆ ಬುದ್ಧಿ ಹೇಳಿ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಬಾಲಕಿ ಮನೆಯಲ್ಲೇ ಇದ್ದರೆ ಮತ್ತೆ ಮದುವೆ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದಿದ್ದರು. ಮದುವೆ ಮುರಿದುಹೋದ ಸಿಟ್ಟಿನಿಂದ ವರ ಮತ್ತು ಆತನ ಕೆಲ ಸಂಬಂಧಿಗಳು ಬಾಲಕಿಯ ಮನೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ಬಾಲಕಿಯ ತಂಗಿಯನ್ನು ಎಳೆದುಕೊಂಡು ಹೋಗಿದ್ದಾರೆ. ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮದುವೆ ನಿಶ್ಚಯಿಸಿ, ವಧುವಿನ ತಂಗಿಯ ಅಪಹರಣಕ್ಕೆ ಸಹಾಯ ಮಾಡಿದ್ದ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)