ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯ ಜಾರಿಗೂ ಇದೀಗ ಆದೇಶ ಹೊರಬಿದ್ದಿದೆ.
ವಿದ್ಯುಚ್ಛಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರಿಕರಿಗೆ ಒದಗಿಸಲು ಮೇ 20ರಂದು ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಅಲ್ಲದೆ ಗೃಹಜ್ಯೋತಿ ಯೋಜನೆ ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ಸರ್ಕಾರದಿಂದ ಪ್ರತ್ಯೇಕ ಆದೇಶ ಹೊರಡಿಸಲಾಗುವುದೆಂದು ಅಂದು ತಿಳಿಸಲಾಗಿತ್ತು.
ಜೂ. 2ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ‘ಗೃಹ ಜ್ಯೋತಿ” ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆ ಆಗಿದ್ದು, ‘ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದ ಪ್ರತಿಮನೆಗೆ ಮಾಸಿಕ ಗರಿಷ್ಠ 200 ಯೂನಿಟ್ ವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ. 10 ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸಂಪುಟ ಸಭೆ ಅನುಮೋದಿಸಿತ್ತು.
ಇದನ್ನೂ ಓದಿ: ನಾಡಿದ್ದೇ ‘ರಾಯರು ಮಾವನ ಮನೆಗೆ..’; ಇದು ಕನ್ನಡ ಚಿತ್ರರಂಗದಲ್ಲೇ ಪ್ರಥಮ!
ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಹಾಯಧನ ಮೊತ್ತವನ್ನು ಹಾಗೂ ಮುಂದಿನ ಮಾಹೆಗಳಲ್ಲಿ ನಿಗದಿಯಾಗುವ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆ ಶುಲ್ಕ ದರಕ್ಕೆ ಸಂಬಂಧಿಸಿದ ಸಹಾಯಧನವನ್ನು ಒಳಗೊಂಡಂತೆ ಒಟ್ಟು ಸಹಾಯಧನವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರದಿಂದ ಮುಂಗಡವಾಗಿ ಒದಗಿಸಲಾಗುವುದು.
ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯಡಿಯ ಫಲಾನುಭವಿಗಳನ್ನು ಗೃಹಜ್ಯೋತಿ ಯೋಜನೆಯಡಿ ಸೇರಿಸಿ ಇಂದು ಹೊಸ ಆದೇಶ ಹೊರಡಿಸಲಾಗಿದೆ.
ಗೃಹಜ್ಯೋತಿ ಯೋಜನೆಯನ್ನು ಜುಲೈ 2023ರ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ 2023ರ ತಿಂಗಳಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಈ ಕೆಳಕಂಡ ಷರತ್ತುಗಳೊಂದಿಗೆ ಜಾರಿಗೆ ತರಲು ಆದೇಶಿಸಿದೆ.
ಇದನ್ನೂ ಓದಿ: ‘ಏ ಕುಳಿತ್ಕೋ.. ನಾನೇ ಇನ್ನೂ ಕುಳಿತಿದ್ದೀನಿ’: ತಾವಿನ್ನೂ ಕೂತಿದ್ದಾಗಲೇ ಎಸ್ಪಿ ಎದ್ದಿದ್ದಕ್ಕೆ ಸಿದ್ದರಾಮಯ್ಯ ಗರಂ!
1. ಈ ಯೋಜನೆಯು ಗೃಹಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ; ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
2. ಪ್ರತಿ ತಿಂಗಳ ಮಿಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸುವುದು.
3. ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್ ನೀಡುವುದು ಹಾಗೂ ಗ್ರಾಹಕರು ನೆಟ್ ಬಿಲ್ ಪಾವತಿಸುವುದು.
4. ಅರ್ಹ ಯೂನಿಟ್/ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.
5. ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
6. ಪ್ರತಿ ಫಲಾನುಭವಿಯು ತನ್ನ ಕಸ್ಟಮರ್ ಐಡಿ ಹಾಗೂ ಅಕೌಂಟ್ ಐಡಿಯನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.
7. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹಜ್ಯೋತಿ ಯೋಜನೆಯಡಿಯಲ್ಲಿ ಸೇರಿಸುವುದು.
ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!