ತಾತನ ಹಾದಿಯಲ್ಲಿ ಮೊಮ್ಮಗಳು; ನಿನ್ನ ಸನಿಹಕೆ ಹಾಡಿಗೆ ಧನ್ಯಾ ಕಂಠ..

Dhanya
Published on

ಬೆಂಗಳೂರು: ಡಾ. ರಾಜ್ ಎಂದಾಕ್ಷಣ ಕೇವಲ ಅವರ ಮನೋಜ್ಞ ಅಭಿನಯ ಮಾತ್ರವಲ್ಲದೆ ಅವರ ಮಧುರ ಧ್ವನಿಯೂ ಕಿವಿಗಪ್ಪಳಿಸುತ್ತದೆ. ಹಾಡುಗಳ ಮೂಲಕವೇ ಅಭಿಮಾನಿಗಳ ಮನದಲ್ಲಿ ಅವರಿನ್ನು ಜೀವಂತವಾಗಿದ್ದಾರೆ. ಆ ಹಾಡುಗಾರಿಕೆ ಅವರ ಮಕ್ಕಳಿಗೂ ಒಲಿದಿದೆ. ಇದೀಗ ಡಾ. ರಾಜ್ ಮೊಮ್ಮಗಳ ಸರದಿ. ಹೌದು, ಧನ್ಯಾ ರಾಮ್ುಮಾರ್ ಸಹ ತಾತನ ಹಾದಿ ಹಿಡಿದಿದ್ದಾರೆ. ಚೊಚ್ಚಲ ‘ನಿನ್ನ ಸನಿಹಕೆ’ ಚಿತ್ರದಲ್ಲಿ ಗಾಯಕಿಯಾಗಿಯೂ ಅವರು ಖಾತೆ ತೆರೆದಿದ್ದಾರೆ. ಸೂರಜ್ ಗೌಡ, ನಾಯಕನಾಗಿ ನಟಿಸಿ ನಿರ್ದೇಶನ ಮಾಡಿರುವ ‘ನಿನ್ನ ಸನಿಹಕೆ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ 20ಕ್ಕೆ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಪ್ರಚಾರ ಕೆಲಸಕ್ಕೂ ಚಾಲನೆ ನೀಡಿರುವ ತಂಡ ಹಾಡು, ಟ್ರೇಲರ್ ಮೂಲಕ ಪ್ರೇಕ್ಷಕರನ್ನು ತಲುಪುತ್ತಿದೆ.

ಈ ನಡುವೆ ‘ನೀ ಪರಿಚಯ...’ ಹಾಡಿನ ಕವರ್ ವರ್ಷನ್​ಗೆ ಧ್ವನಿ ನೀಡಿ ಗಾಯನಕ್ಕೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಧನ್ಯಾಗೆ ಸೂರಜ್ ಸಹ ಹಾಡಿನಲ್ಲಿ ಸಾಥ್ ನೀಡಿದ್ದಾರೆ. ‘ನಮ್ಮ ಕುಟುಂಬದಲ್ಲಿ ತಾತ ನನ್ನ ನೆಚ್ಚಿನ ಸಿಂಗರ್. ಅವರ ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದೇವೆ. ಇದೀಗ ನನ್ನ ಮೊದಲ ಚಿತ್ರದ ಹಾಡಿಗೆ ಧ್ವನಿ ನೀಡಿದ್ದೇನೆ. ಈ ಹಾಡು ಹೇಗೆ ಮೂಡಿ ಬರುತ್ತದೆ ಎಂಬ ಭಯ ಇತ್ತು. ನನ್ನ ಕಂಠದಲ್ಲಿ ಇಂಗ್ಲಿಷ್ ಹಾಡು ಕೇಳುತ್ತಿದ್ದ ಅಪ್ಪನಿಗೂ ನನ್ನ ಕನ್ನಡ ಹಾಡು ಇಷ್ಟವಾಯ್ತು. ಪ್ರೇಕ್ಷಕ ವರ್ಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೇನು ಕೆಲ ದಿನಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ’ ಎಂಬುದು ಅವರ ಮಾತು.

ಟ್ರೇಲರ್ ಮೂಲಕ ಭರವಸೆ: ಈಗಾಗಲೇ ಹಾಡುಗಳ ಮೂಲಕ ಮೆಚ್ಚುಗೆ ಪಡೆದಿ ರುವ ‘ನಿನ್ನ ಸನಿಹಕೆ’ ಚಿತ್ರ, ಭಾನುವಾರ ಟ್ರೇಲರ್ ಬಿಡುಗಡೆ ಮಾಡಿದೆ. ರೊಮ್ಯಾಂಟಿಕ್ ಲವ್​ಸ್ಟೋರಿ ಜತೆಗೆ ಹಾಸ್ಯ, ಸೆಂಟಿಮೆಂಟ್ ಬೆರೆಸಿ ಕಮರ್ಷಿಯಲ್ ಶೈಲಿಯ ಚಿತ್ರವನ್ನು ಸಿದ್ಧಪಡಿಸಿದ್ದಾರೆ ನಿರ್ದೇಶಕ ಕಮ್ ಹೀರೋ ಸೂರಜ್ ಗೌಡ. ರಘು ದೀಕ್ಷಿತ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅಭಿಲಾಶ್ ಕಲಾತಿ ಛಾಯಾಗ್ರಹಣ ಮಾಡಿದ್ದಾರೆ. ವೈಟ್ ಆಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net