ಪೈರಸಿ ಮಾಡಿ ಪೊಲೀಸರ ಅತಿಥಿಯಾದ ಪದವಿ ವಿದ್ಯಾರ್ಥಿ!

CEN Police
Published on

ಬೆಂಗಳೂರು: ಸ್ಟಾರ್ ಟಿವಿ, ಹಾಟ್ ಸ್ಟಾರ್ ಪೈರಸಿ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಶಿಶಾರಾಮ್ ಭದಿಯಾ (22) ಬಂಧಿತ. ಕೃತ್ಯಕ್ಕೆ ಬಳಸಿದ್ದ ಲ್ಯಾಪ್‌ಟಾಪ್, 2 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಶಿಶಾರಾಮ್, ಸ್ಟಾರ್ ಟಿವಿ ಮತ್ತು ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆಗುತ್ತಿದ್ದ ಸಿನಿಮಾ ಮತ್ತು ಲೈವ್ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಗಳನ್ನು ತಂತ್ರಜ್ಞಾನ ಬಳಸಿ ಲೈವ್ ಸ್ಕ್ರೀನ್‌ನನ್ನು ಕಾಫಿ ಮಾಡಿ ಅಪ್ಲಿಕೇಷನ್‌ಗೆ ಅಪ್‌ಲೋಡ್ ಮಾಡುತ್ತಿದ್ದ. ಇದರಲ್ಲಿ ಬರುತ್ತಿದ್ದ ಜಾಹೀರಾತು ಹಣವನ್ನು ಆರೋಪಿ ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ. ಇದರಿಂದ ಸ್ಟಾರ್ ಟಿವಿ ಕಂಪನಿಗೆ ನಷ್ಟ ಉಂಟಾಗುತ್ತಿತ್ತು.

ಈ ಬಗ್ಗೆ ಸ್ಟಾರ್ ಟಿವಿ ಪ್ರತಿನಿಧಿಗಳು, ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದರು.ಈ ಮೇರೆಗೆ ಪ್ರಕರಣ ದಾಖಲು ಮಾಡಿದ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಆರೋಪಿ ಮೊಬೈಲ್ ನಂಬರ್ ಮತ್ತು ತಾಂತ್ರಿಕ ಸಹಾಯದಿಂದ ರಾಜಸ್ಥಾನದಲ್ಲಿ ಶಿಶಾರಾಮ್‌ನನ್ನು ಬಂಧಿಸಿ ಕರೆತಂದಿದ್ದಾರೆ. ಅಕ್ರಮ ಹಣ ಸಂಪಾದನೆ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net