ಕ್ರಿಕೆಟ್ ಪ್ರಿಯರ ಹೃದಯ ಗೆದ್ದ ರೋಹಿತ್ ಶರ್ಮಾ; ಟೀಂ ಇಂಡಿಯಾ ನಾಯಕನ ಬಗ್ಗೆ ಶ್ರೀಲಂಕಾ ಮಾಜಿ ನಾಯಕ ಹೇಳಿದ್ದೇನು?

IND vs SL
Published on

ಗುವಾಹಟಿ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 67 ರನ್​ಗಳ ಅಂತರದಿಂದ ಗೆದ್ದುಕೊಂಡಿತ್ತು. ಈ ಪಂದ್ಯದ ಕೊನೆಯೆ ಓವರ್ ಹಲವು ಕಾರಣಗಳಿಂದ ಇದೀಗ ಚರ್ಚೆಯಾಗುತ್ತಿದೆ. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಎಸೆದ ಈ ಓವರ್​ನಲ್ಲಿ ಶತಕದ ಹೊಸ್ತಿಲಿನಲ್ಲಿದ್ದ ದಶೂನ್ ಶಾನಕ ಅವರನ್ನು ನಾನ್​ಸ್ಟ್ರೈಕ್​ನಲ್ಲಿ ಮಂಕಡ್ ರನೌಟ್ ಮಾಡಿದ್ದರು. ಇದಾದ ಬಳಿಕೆ ರೋಹಿತ್ ಶರ್ಮಾ ತೋರಿದ ವರ್ತನೆ ಇದೀಗ ಸಾಕಷ್ಟು ಪ್ರಶಂಸೆಗೆ ಕಾರಣವಾಗುತ್ತಿದೆ.

ಶ್ರೀಲಂಕಾ ನಾಯಕ ದಶೂನ್ ಶಾನಕ 98 ರನ್​ಗಳಿಗೆ ಶತಕದ ಹೊಸ್ತಿಲಿನಲ್ಲಿದ್ದರು. ಮೊಹಮ್ಮದ್ ಶಮಿ 50ನೇ ಓವರ್ ಬೌಲಿಂಗ್ ಮಾಡಲು ಬಂದಾಗ ನಾನ್‌ ಸ್ಟ್ರೈಕ್‌ನಲ್ಲಿ ಶಾನಕ ಕ್ರೀಸ್ ತೊರೆದಿದ್ದರಿಂದ ಮಂಕಡ್ ರನೌಟ್ ಮಾಡಿದರು. ಈ ವೇಳೆ ಮೈದಾನದಲ್ಲಿದ್ದ ಅಂಪೈರ್ ನಿತಿನ್ ಮೆನನ್ ನಿರ್ಣಯಕ್ಕಾಗಿ ಥರ್ಡ್ ಅಂಪೈರ್​ ಮೊರೆ ಹೋದರು. ಕೂಡಲೇ ಮಧ್ಯಪ್ರವೇಶಿಸಿದ ರೋಹಿತ್ ಶರ್ಮಾ, ಮನವಿಯನ್ನು ಹಿಂಪಡೆದರು. ಇದರಿಂದ ಶ್ರೀಲಂಕಾ ತಂಡದ ನಾಯಕ ತಮ್ಮ ಎರಡನೇ ಏಕದಿನ ಶತಕ ದಾಖಲಿಸಲು ಸಾಧ್ಯವಾಯಿತು.

ಮಧ್ಯ ಪ್ರವೇಶಿಸಿ ತಮ್ಮ ನಿರ್ಣಯವನ್ನು ಹಿಂದೆ ತೆಗೆದುಕೊಂಡ ಬಗ್ಗೆ ಪಂದ್ಯದ ಬಳಿಕ ರೋಹಿತ್ ಶರ್ಮಾ ಮಾತನಾಡಿ, ಮೊಹಮ್ಮದ್ ಶಮಿ ಮಂಕಡಿಂಗ್ ಮಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ತಿಳಿದಿರಲಿಲ್ಲ. ಶಾನಕ ಈ ವೇಳೆ 98 ರನ್ ಗಳಿಸಿ ಆಟವಾಡುತ್ತಿದ್ದರು. ಅವರನ್ನು ಔಟ್ ಮಾಡಲು ಪ್ರಯತ್ನಿಸಿದ್ದೆವು. ಆದರೆ ಈ ರೀತಿ ಔಟ್ ಮಾಡುವುದು ಸರಿ ಎಂದೆನಿಸಲಿಲ್ಲ. ಹೀಗಾಗಿ ನಿರ್ಣಯವನ್ನು ಹಿಂಪಡೆದೆ. ಶಾನಕ ತುಂಬಾ ಚೆನ್ನಾಗಿ ಬ್ಯಾಟಿಂಗ್ ನಡೆಸಿದರು. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಇದೀಗ ರೋಹಿತ್ ಶರ್ಮಾ ನಡೆಯನ್ನು ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಪ್ರಶಂಸಿಸಿದ್ದಾರೆ. ರನ್​ಔಟ್​ ನಿರ್ಣಯವನ್ನು ನಿರಾಕರಿಸಿದ ರೋಹಿತ್ ಶರ್ಮಾ ಅವರ ಕ್ರೀಡಾ ಮನೋಭಾವವೇ ನಿಜವಾದ ಗೆಲುವು. ನನ್ನ ಕ್ಯಾಪ್​ನ್ನು ನಿಮಗೆ ಕೊಡುತ್ತೇನೆ ಎಂದು ಸನತ್ ಜಯಸೂರ್ಯ ಟ್ವೀಟ್ ಮುಖಾಂತರ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net